

ಮಂಗಳೂರು: ವಿಧಾನಸಭಾ ಚುನಾವಣೆ ವೇಳೆಗೆ ಕರಾವಳಿಯಲ್ಲಿ ಪೂರಕ ವಾತಾವರಣ ಸೃಷ್ಟಿಸಲು ಕಾಂಗ್ರೆಸ್ ಮುಂದಾಗಿದ್ದು, ಏ.24, 25ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ 27ರಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಪ್ರವಾಸ ಕೈಗೊಳ್ಳಲಿದ್ದಾರೆ.
24ರಂದು ಚಿಕ್ಕಮಗಳೂರು, ತರೀಕೆರೆ ಪ್ರವಾಸ ಮುಗಿಸಿ ಮಂಗಳೂರಿಗೆ ಬರಲಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎನ್‌ಎಸ್‌ಯುಐ, ಯುವ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಬಳಿಕ ಇದು ಅವರ ಪ್ರಥಮ ಭೇಟಿ. ಅಂದು ಮಂಗಳೂರಲ್ಲೇ ವಾಸ್ತವ್ಯ ಹೂಡುವ ಖರ್ಗೆ 25ರಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಎಂ.ಜಾನ್ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮಧ್ಯಾಹ್ನ 12 ಗಂಟೆಗೆ ಸುಳ್ಯದಲ್ಲಿ ಆಯೋಜಿಸಲಾಗುವ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬೆಳ್ತಂಗಡಿ, ಪುತ್ತೂರು, ಸುಳ್ಯ ಕ್ಷೇತ್ರದ ಕಾರ್ಯಕರ್ತರು ಹಾಗೂ ಮುಖಂಡರು ಕೂಡ ಭಾಗವಹಿಸುವರು. ಬಳಿಕ ಸಾಯಂಕಾಲ 4 ಕ್ಕೆ ಮಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಆರು ಗಂಟೆಗೆ ಅವರು ಮಂಗಳೂರಿನಿಂದ ತೆರಳುವರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ.ಹರೀಶ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಸವಾದ್ ಸುಳ್ಯ, ಮುಖಂಡರಾದ ಪ್ರವೀಣ್‌ಚಂದ್ರ ಆಳ್ವ, ಸಂತೋಷ್ ಕುಮಾರ್ ಶೆಟ್ಟ ಉಪಸ್ಥಿತರಿದ್ದರು.
27ಕ್ಕೆ ಭರ್ಜರಿ ರೋಡ್ ಶೋ
ಉಡುಪಿ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮ ಮುಗಿಸಿ 27ರಂದು ಮಂಗಳೂರಿಗೆ ರಾಹುಲ್ ಗಾಂಧಿ ಸಂಜೆ ಐದು ಗಂಟೆಗೆ ಆಗಮಿಸಲಿದ್ದಾರೆ ಎಂದು ರೋಜಿ ಹೇಳಿದರು. ಮಂಗಳೂರು ಕಲೆಕ್ಟರ್ಸ್ ಗೇಟ್‌ನಿಂದ ನೆಹರು ಮೈದಾನದ ತನಕ ನಡೆಯುವ 2 ಕಿ.ಮೀ. ದೂರದ ಭರ್ಜರಿ ರೋಡ್ ಶೋನಲ್ಲಿ ರಾಹುಲ್ ಭಾಗವಹಿಸುವರು. ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್‌ನ ಯುವ ಕಾರ್ಯಕರ್ತರು ರೋಡ್ ಶೋಗೆ ಹೊಸ ಚೈತನ್ಯ ತುಂಬಲಿದ್ದಾರೆ. ರೋಡ್ ಶೋ ಮುಕ್ತಾಯವಾಗುವ ಪ್ರದೇಶದಲ್ಲಿ ರಾಹುಲ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಪ್ರತ್ಯೇಕ ಸಾರ್ವಜನಿಕ ಸಭೆ ಇಲ್ಲ ಎಂದರು.
ಸರ್ವೇ ಸುಳ್ಳು
ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಬಿಬಿಸಿ ಸಮೀಕ್ಷೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಪ್ರಚಾರ ಸುಳ್ಳು ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು. ಇಂತಹ ಸಮೀಕ್ಷೆಯನ್ನು ಬಿಬಿಸಿ ಮಾಡಿಲ್ಲ. ಇದು ಫೇಕ್ ಎಂದು ಬಿಬಿಸಿಯೇ ಸ್ಪಷ್ಟನೆ ನೀಡಿದೆ. ಬಿಜೆಪಿಯವರು ಈ ಚುನಾವಣೆಯಲ್ಲಿ ಹತಾಶರಾಗಿ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದರು.