

ಉಡುಪಿ: ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂಬುದಾಗಿ ವರದಿ ನೀಡಿ ಆಡಿಕೆ ಬೆಳೆಗಾರರ ಬದುಕಿಗೆ ಬಿಜೆಪಿ ಸರ್ಕಾರ ತೊಂದರೆಯುಂಟುಮಾಡಿತ್ತು. ಆದರೆ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರ ಜನಪರ ಕಾಳಜಿಯಿಂದ ಅಡಿಕೆಗೆ ಇಂದು ಉತ್ತಮ ಬೆಲೆ ಸಿಗುತ್ತಿದೆ. ಕ್ವಿಂಟಾಲ್ಗೆ ಹತ್ತು ಸಾವಿರವಿದ್ದ ಅಡಿಕೆ ಬೆಲೆ ಐವತ್ತರ ಗಡಿ ದಾಟಿದೆ ಎಂದು ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಹೇಳಿದ್ದಾರೆ.
ಭಾನುವಾರ ಅಜ್ಜಂಪುರ ತಾಲೂಕಿನ ಶ್ಯಾನುಭೊಗರ ಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ಜಯಪ್ರಕಾಶ್ ಹೆಗ್ಡೆ ಅವರು ಮಾಡಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ವೈಫಲ್ಯಗಳನ್ನೇ ಹೊದ್ದು ಮಲಗಿರುವ ಬಿಜೆಪಿ ಪಕ್ಷಕ್ಕೆ ಈಗ ಹೇಳಿಕೊಳ್ಳಲು ಏನೂ ಉಳಿದಿಲ್ಲ. ಇನ್ನೊಬ್ಬರು ಮಾಡಿದ ಕಾರ್ಯಗಳನ್ನು ತನ್ನ ಕಾರ್ಯವೆಂದು ಹೇಳಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದೆ. ಆದರೆ ಪ್ರಜ್ಞಾವಂತ ನಾಗರಿಕರಿಗೆ ಈ ಬಗ್ಗೆ ಅರಿವಿದೆ ಎಂದರು.
ಈ ಸಂದರ್ಭದಲ್ಲಿ ಉಡುಪಿ-&ಚಿಕ್ಕಮಗಳೂರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಅಡಿಕೆ ಬೆಳೆಗಾರರಿಗೆ ನ್ಯಾಯ ದೊರಕಿಸಿರುವ ಬಗ್ಗೆ ತೃಪ್ತಿ ಇದೆ. ಈ ಬಗ್ಗೆ ದಾಖಲೆಗಳೇ ಹೇಳುತ್ತಿವೆ. ಅಡಿಕೆ ತಿಂದರೆ ಕ್ಯಾನ್ಸರ್ ಬರುತ್ತದೆ ಎಂಬ ಸುಳ್ಳು ಸುದ್ದಿ ಹರಡಿದವರು ಯಾರೆಂಬು ಎಲ್ಲರಿಗೂ ತಿಳಿದಿದೆ. ಈ ಭಾಗದ ಜನರು ತೋರುತ್ತಿರುವ ಪ್ರೀತಿ ಎಲ್ಲವನ್ನೂ ಹೇಳುತ್ತಿದೆ ಎಂದರು.
ನೀರಿನ ಸಮಸ್ಯೆಗೆ ಪರಿಹಾರ
ತಾಲೂಕಿನಲ್ಲಿ ಅನೇಕ ಕಡೆಗಳಲ್ಲಿ ನೀರಿನ ಸಮಸ್ಯ ಇದೆ. ಜನರು ಮತ ಕೇಳುವಾಗ ತಾವು ಕಳೆದ ಹತ್ತು ವರ್ಷಗಳಿಂದ ಅನುಭವಿಸಿದ ನೋವನ್ನು ಹೇಳಿಕೊಳ್ಳುತ್ತಿದ್ದಾರೆ. ಯಾವ ಸಮಸ್ಯೆಗೆ ಮೊದಲ ಆದ್ಯತೆ ಕೊಡಬೇಕೆಂಬ ಅರಿವಿದೆ. ಊರಿನ ಪ್ರಮುಖರು ಹಾಗೂ ನಿಮ್ಮನ್ನೂ ಕೂಡಿಸಿಕೊಂಡು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳೋಣ. ಇದು ನನ್ನ ಕರ್ತವ್ಯ ಹೊರತು ನಿಮಗೆ ಮಾಡುವ ಸೇವೆಯಲ್ಲ ಎಂದರು.
ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿರುವ ಉಚಿತ ಯೋಜನೆ ರಾಜ್ಯದ ಬಡವರಿಗೆ ಉತ್ತಮ ರೀತಿಯಲ್ಲಿ ನೆರವಾಗಿದೆ. ಮತ ಯಾಚನೆ ಮಾಡುವಾಗ ಜನ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದು ಇಲ್ಲಿಂದ ಕಾಲ್ಕಿತ್ತ ಶೋಭ ಕರಂದ್ಲಾಜೆ ಅವರನ್ನು ಜನ ಪ್ರಶ್ನಿಸುತ್ತಿದ್ದಾರೆ. ಕಾಂಗ್ರೆಸ್ ಪ್ರತಿಭಾವಂತ ರಾಜಕಾರಣಿ ಜಯಪ್ರಕಾಶ್ ಹೆಗ್ಡೆ ಅವರನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ ಎಂದರು.