

ಚಿಕ್ಕಬಳ್ಳಾಪುರ: ಖಾಲಿ ಅಡುಗೆ ಅನಿಲ ಸಿಲಿಂಡರ್, ಭಿತ್ತಿ ಪತ್ರಗಳೊಂದಿಗೆ ಕಾಂಗ್ರೆಸ್ ಪ್ರತಿಭಟಿಸುವ ಮೂಲಕ ಬೆಲೆ ಏರಿಸಿದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಕೇಂದ್ರ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಬೆಲೆ ಏರಿಕೆ ಕಾಣುತ್ತಿದೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸಿಲಿಂಡರ್, ರಸಗೊಬ್ಬರದ ಜತೆಗೆ ಅಗತ್ಯ ವಸ್ತುಗಳ ದರವು ನಿರೀೆಗೂ ಮೀರಿ ಹೆಚ್ಚಳವಾಗಿದೆ. ಇದರಿಂದ ಸಾಮಾನ್ಯ ಜನರು ಜೀವನ ನಡೆಸಲು ಪರದಾಡುವಂತಾಗಿದೆ. ಇದನ್ನರಿತುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಉಚಿತ ಸೌಲಭ್ಯವನ್ನು ಒದಗಿಸಿ, ಆರ್ಥಿಕ ಸಂಕಷ್ಟದ ಹೊರೆಯನ್ನು ತಗ್ಗಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ತಿಳಿಸಿದರು.
ಕೇಂದ್ರ ಸರ್ಕಾರದಿಂದ ಜನರಿಂದ ದುಬಾರಿ ತೆರಿಗೆ ಪಡೆದುಕೊಳ್ಳುತ್ತಿದ್ದರೂ ನಿರೀೆಗೆ ಅನುಗುಣವಾಗಿ ಸವಲತ್ತುಗಳನ್ನು ಒದಗಿಸುತ್ತಿಲ್ಲ. ಆದರೆ, ಬಂಡವಾಳಶಾಹಿಗಳಿಗೆ ಮಾತ್ರ ಅನುಕೂಲಕರ ನೀತಿಗಳ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ನೆರವಾಗುತ್ತಿದೆ ಎಂದು ಆರೋಪಿಸಿದರು.
ಜಿ.ಪಂ.ಮಾಜಿ ಸದಸ್ಯ ಕೆ.ಎಂ.ಮುನೇಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿಯು ಜನಾಕ್ರೋಶ ಹೋರಾಟವನ್ನು ಕೈಗೊಳ್ಳುತ್ತಿರುವುದು ಹಾಸ್ಯಾಸ್ಪದ. ಮೊದಲು ಕೇಂದ್ರದ ಮೇಲೆ ಬೆಲೆ ಏರಿಕೆ ನಿಯಂತ್ರಣ, ಕರ್ನಾಟಕಕ್ಕೆ ನಿಯಮಾನುಸಾರ ಜಿಎಸ್ಟಿ ಪಾಲು ಮತ್ತು ಅಗತ್ಯ ಅನುದಾನ, ವಿವಿಧ ಯೋಜನೆಗಳ ಜಾರಿಗೆಗೆ ಒತ್ತಡ ಹೇರಲಿ ಎಂದು ಸವಾಲೆಸೆದರು.
ಪ್ರತಿಭಟನೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕುಬೇರ್ ಅಚ್ಚು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ ಮತ್ತಿತರರು ಭಾಗವಹಿಸಿದ್ದರು.