

ಮೈಸೂರು: ಈಗಿನ ರಾಜಕೀಯ ಸನ್ನಿವೇಶ ಯಾವುದು ಸರಿ ಇಲ್ಲ, ಹೀಗಾಗಿಯೇ ನಾನು ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ನಿವೃತ್ತಿಗೆ ಮುಂದಾಗಿದ್ದೆ ಎಂದು ಶಾಸಕ ತನ್ವೀರ್ ಸೇಠ್ ಹೇಳುವ ಮೂಲಕ ಪ್ರಸ್ತುತ ನಡೆಯುತ್ತಿರುವ ಪಕ್ಷಾಂತರ ಬೆಳವಣಿಗೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷಾಂತರ ಮಾಡುವವರ ವಿರುದ್ಧ ಎಷ್ಟೇ ಕಾನೂನು ಬಿಗಿ ಮಾಡಿದರು ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸುತ್ತಾರೆ. ಇಂತಹವರಿಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇರೆ ಪಕ್ಷದ ಶಾಸಕರನ್ನು ಸೆಳೆಯುವ ಅಪರೇಷನ್‌ಗೆ ನಾವು ಕೈ ಹಾಕುವುದಿಲ್ಲ. ನಮಗೆ ಅಪರೇಷನ್ ಹಸ್ತದ ಅವಶ್ಯಕತೆ ಇಲ್ಲ. ಜನರು ಬದಲಾವಣೆ ಬಯಸಿ ನಮಗೆ 136 ಸ್ಥಾನಗಳನ್ನು ಕೊಟ್ಟಿದ್ದಾರೆ. ಹೀಗಿರುವಾಗ ಆಪರೇಷನ್ ಹಸ್ತದ ಅವಶ್ಯಕತೆ ಇಲ್ಲ. ಶಾಸಕ ಎಸ್.ಟಿ. ಸೋಮಶೇಖರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ಕ್ಷೇತ್ರದ ಕೆಲಸದ ವಿಚಾರಕ್ಕೆ. ಪಕ್ಷ ಸೇರುವ ಊಹಾಪೋಹದ ಕುರಿತು ಸೋಮಶೇಖರ್ ಅವರೇ ಉತ್ತರ ಕೊಡಬೇಕು ಎಂದರು.
ಪಕ್ಷಕ್ಕೆ ಬನ್ನಿ ಎಂದು ನಾವು ಯಾರಿಗೂ ಆಹ್ವಾನ ನೀಡಿಲ್ಲ. ಪಕ್ಷಕ್ಕೆ ಬರುವವರು ನನ್ನ ಬಳಿ ಬಳಿ ಮಾತನಾಡಿಲ್ಲ, ಹಾಗಾಗಿ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. 15 ಜನ ಹಾಲಿ, ಮಾಜಿ ಶಾಸಕರು ಪಕ್ಷಕ್ಕೆ ಬರುವ ವಿಚಾರವನ್ನು ಸಚಿವ ಚೆಲುವರಾಯಸ್ವಾಮಿ ಪ್ರಸ್ತಾಪಿಸಿದ್ದು, ಈ ಕುರಿತು ಅವರೇ ಉತ್ತರ ನೀಡಬೇಕು ಎಂದು ಹೇಳಿದರು.
ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸಲಾಗಿದೆ ಎಂಬುದು ಗೊತ್ತಿಲ್ಲ, ಮುಖ್ಯಮಂತ್ರಿ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಸಭೆಯಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡೋಣ. ನಮ್ಮ ರಾಜ್ಯದ ರೈತರ ಹಿತಕೋಸ್ಕರ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೃಷಿ ಚಟುವಟಿಕೆಗೋಸ್ಕರ ನೀರು ಬಿಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಈ ಬಾರಿ ಮುಂಗಾರು ದುರ್ಬಲಗೊಂಡಿದ್ದು, ಇಂತಹ ಪರಿಸ್ಥಿತಿಯಲ್ಲಿ ಎಷ್ಟು ನೀರು ಬಿಡಬೇಕು ಎಂಬುದನ್ನು ನ್ಯಾಯಾಧೀಕರಣ ಸ್ಪಷ್ಟವಾಗಿ ಹೇಳಿದೆ. ಮಳೆ ಕೊರತೆಯಾದ ಸಂದರ್ಭ ಸಂಕಷ್ಟ ಸೂತ್ರವನ್ನು ಅಳವಡಿಸಲಾಗುವುದು. ಕಾವೇರಿ ವಿಚಾರವಾಗಿ ಬಿಜೆಪಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿ ತನ್ನ ಅಸ್ತಿತ್ವವನ್ನು ತಾನೇ ಕಳೆದುಕೊಳ್ಳುತ್ತಿದ್ದು, ಮೊದಲು ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಿ ಸಭೆಯಲ್ಲಿ ಕುಳಿತು ಮಾತನಾಡಲಿ ಎಂದು ಹೇಳಿದರು.