ಬಿಎಸ್‌ವೈ ಇಲ್ಲದೆ ಬಿಜೆಪಿ ಗೆಲುವು ಕಷ್ಟ, ಮಾಜಿ ಸಿಎಂ ಪರ ಶಾಮನೂರು ಬ್ಯಾಟಿಂಗ್...

shamnur bsy pic
Published on

ದಾವಣಗೆರೆ: ಬಿಎಸ್‌ವೈ ಇಲ್ಲದೆ ಬಿಜೆಪಿ ಗೆಲುವು ಕಷ್ಟ ಎಂಬ ಸಮೀಕ್ಷಾ ವರದಿಗಳನ್ನು ಆಧರಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸಾರಥ್ಯ ವಹಿಸುವಂತೆ ಅವರಿಗೆ ಕಮಲ ಪಾಳಯ ಮೊರೆ ಹೋಗಿದೆ. ಹೀಗೆಂದು ಹಿರಿಯ ಕಾಂಗ್ರೆಸ್ ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಯವರು ಇತ್ತೀಚೆಗೆ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ, ಈಗಿರುವ 120 ಶಾಸಕರ ಪೈಕಿ 20-30 ಜನರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗುವುದು ಕಷ್ಟವಿದೆ. ಪಕ್ಷವನ್ನು ನೀವೇ ಗೆಲ್ಲಿಸಬೇಕು, ನೀವೇ ಮುಖ್ಯಮಂತ್ರಿಗಳಿದ್ದ ಹಾಗೆ ಎಂದು ಬಿಎಸ್‌ವೈಗೆ ಆ ಪಕ್ಷದವರು ದುಂಬಾಲು ಬಿದ್ದಿದ್ದಾರೆ. ಆದರೆ ಜನರು ಅಷ್ಟು ದಡ್ಡರಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಅನುಮಾನವಿಲ್ಲ ಎಂದರು.

ಬಿಜೆಪಿಯವರು ಭ್ರಷ್ಟಾಚಾರದಿಂದ ಬಂದ ಹಣವನ್ನು ಚುನಾವಣೆಯಲ್ಲಿ ಖರ್ಚು ಮಾಡಿ ಗೆಲ್ಲುತ್ತಾರೆ. ಅನ್ಯ ಪಕ್ಷದವರನ್ನು ತಮ್ಮತ್ತ ಸೆಳೆಯುತ್ತಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿದೆ, ಯಾವುದೇ ಕಿತ್ತಾಟ, ಅಸೂಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net