

ಮಂಡ್ಯ: ರಾಜ್ಯ ಸರ್ಕಾರ ಕೆಡವಲು ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ಕೊಡಲಾಗುತ್ತಿದೆ. ಬಿಜೆಪಿಯ ಬ್ರೋಕರ್‌ಗಳು ಪ್ರತಿನಿತ್ಯ ನಮ್ಮ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆಂದು ಶಾಸಕ ರವಿಕುಮಾರ್ ಗಣಿಗ ಸ್ಫೋಟಕ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಶಾಸಕರಿಗೆ 50 ಕೋಟಿ ರೂನಿಂದ 100 ಕೋಟಿ ರೂ.ಗೆ ಆಫರ್ ಏರಿಕೆ ಆಗಿದೆ. ಮೊನ್ನೆಯೂ ಕೆಲ ಕಾಂಗ್ರೆಸ್ ಶಾಸಕರಿಗೆ ಕರೆಬಂದಿದೆ. 100 ಕೋಟಿ ರೂ ರೆಡಿ ಇದೆ ಎಲ್ಲಿಗೆ ಬರುತ್ತೀರಾ. 50 ಶಾಸಕರ ಖರೀದಿಗೆ ಪ್ಲ್ಯಾನ್ ನಡೆದಿದೆ ಎಂದು ಆಫರ್ ಮಾಡಿದ್ದಾರೆ. ನನಗೆ ಯಾರೋ ಒಬ್ಬ ಫೋನ್ ಮಾಡಿದ್ದ, ನೂರು ಕೋಟಿ ರೂ ರೆಡಿ ಎಂದು ಹೇಳಿದ. ಅದಕ್ಕೆ ನಾನು, ಹೇಯ್ ನೂರು ಕೋಟಿ ರೂ ಇಟ್ಕೋಳಯ್ಯ, ನಿನ್ನ ಯಾರು ಇಡಿಯವರು ಹಿಡಿಯುತ್ತಿಲ್ವಾ ಎಂದು ಹೇಳಿದ್ದೇನೆ. ಈ ಹಿನ್ನೆಲೆಯಲ್ಲಿ ಇಡಿಯವರಿಗೆ ಕರೆ ಮಾಡಬೇಕು ಎಂತಲೂ ಚಿಂತಿಸಿದ್ದೆ. ಒಟ್ಟಾರೆ ನಮ್ಮ ಸರ್ಕಾರ ಬೀಳಿಸಲು ದಿನನಿತ್ಯ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಸಂತೋಷ್ ಜೀ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಇವರೆಲ್ಲಾ ಒಂದು ಗ್ಯಾಂಗ್ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಬೀಳಿಸುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮಾತು ಕೊಟ್ಟಿದ್ದಾರೆ. ಆದರೆ ನಮ್ಮದು 136 ಶಾಸಕರಿರುವ ಬಂಡೆಯಂತಹ ಸರ್ಕಾರ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಲ್ಲ. ಆದ್ದರಿಂದ ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ. ಫೋನ್ ಮಾಡಿ ಆಫರ್ ಮಾಡಿದವನ ಆಡಿಯೋ ಇದೆ. ಸರಿಯಾದ ಸಮಯದಲ್ಲಿ ರಿಲೀಸ್ ಮಾಡುತ್ತೇವೆ. ಆಪರೇಷನ್ ಕಮಲದ ಬಗ್ಗೆ ಮತ್ತಷ್ಟು ಎವಿಡೆನ್ಸ್ ಕಲೆ ಹಾಕುತ್ತೀದ್ದೀವಿ. ಸಾಕ್ಷಿ ಸಮೇತ ಐಟಿ, ಇಡಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಕೊಡುತ್ತೀವಿ ಎಂದು ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ಸಿಗರಿಂದ ಸಂವಿಧಾನ ಹುದ್ದೆ ರಾಜ್ಯಪಾಲರಿಗೆ ಅಪಮಾನವೆಂಬ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ರವಿಕುಮಾರ್ ಗಣಿಗ, ರಾಜ್ಯಪಾಲರು ಬೆಳಗ್ಗೆ ಎದ್ದು ರಾಜಕೀಯ ಮಾಡುತ್ತಿದ್ದಾರೆ. ನಾವು ಮಾಡಿದರೆ ಸಂವಿಧಾನಕ್ಕೆ ವಿರೋಧಿನಾ?. ಬೀದಿಯಲ್ಲಿ ಹೋಗುವವರು ದೂರು ಕೊಟ್ಟ ತಕ್ಷಣ ಸಿಎಂ ಮೇಲೆ ಪ್ರಾಸಿಕ್ಯೂಷನ್ ಕೊಡಿ ಎಂದು ಎಲ್ಲಿದೆ?. ರಾಜ್ಯಪಾಲರು ಸಂವಿಧಾನ ಮಿಸ್ ಯೂಸ್ ಮಾಡಬಹುದಾ?. ಜನಪ್ರಿಯ ಸರ್ಕಾರ ನಡೆಸುತ್ತಿರುವ ನಾವು ಮಾತನಾಡಬಾರದ. ಏನು ಹೇಳಿದರೂ ಕೇಳಿಕೊಂಡು ಇರುವುದಕ್ಕೆ ನಾವೇನು ಮಂಗನನ್ನ ಮಕ್ಕಳಾ?. ರಾಜ್ಯಪಾಲರು ನಡೆದುಕೊಳ್ಳುತ್ತೀರುವುದು ಸರಿಯಲ್ಲ. ಸರ್ಕಾರ ಅಸ್ಥಿರ ಮಾಡುತ್ತೀರಾ ಎಂದು ಜನರೇ ರಾಜ್ಯಪಾಲರ ಮೇಲೆ ದಂಗೆ ಹೇಳುತ್ತಾರೆ. ರಾಜ್ಯಪಾಲರು ಸರ್ಕಾರದ ಪರ ಇರಬೇಕೆ ಹೊರತು ಸರ್ಕಾರದ ವಿರುದ್ದವಲ್ಲ. ಯಾರೋ ಮೂರು ಜನರಿಂದ ದೂರು ತಕೊಂಡು ಸರ್ಕಾರ ಅಸ್ಥಿರಕ್ಕೆ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಜನರು ದಂಗೆ ಏಳದೇ ಇನ್ನೆನೂ ಮಾಡುತ್ತಾರೆ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ರಾಜ್ಯಪಾಲರು ನಡೆದುಕೊಳ್ಳುತ್ತಿದ್ದಾರೆ. ಜನರು ದಂಗೆ ಎದ್ದಾಗ ಯಾವ ರೀತಿ ಎಂದು ಗೊತ್ತಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.