

ಮಂಡ್ಯ: ದಲಿತ ಸಮುದಾಯಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುತ್ತಿದೆ ಎನ್ನುವುದು ಸುಳ್ಳು. ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಲ್ಲೇ ಪರಿಭಾವಿತ ವೆಚ್ಚಕ್ಕೆ ಅವಕಾಶವಿದೆ. ಇದನ್ನು ಹಿಂದಿನ ಬಿಜೆಪಿ ಸರ್ಕಾರ ಮಾಡಿದೆ ಎಂದು ಮಳವಳ್ಳಿ ಶಾಸಕರೂ ಆದ ಎಸ್ಸಿ ಮತ್ತು ಎಸ್ಟಿ ಸದನ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
2013ರಲ್ಲಿ ತಮ್ಮದೇ ಅಧ್ಯಕ್ಷತೆಯ ಸದನ ಸಮಿತಿ ಎಸ್ಸಿ ಮತ್ತು ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲು ಜಾರಿಗೆ ವರದಿ ಸಿದ್ಧಪಡಿಸಿತ್ತು. ಅದನ್ನು ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಯಥಾವತ್ತಾಗಿ ಜಾರಿಗೊಳಿಸಿದರು. ಈ ವರದಿಯೇ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯಾಗಿದೆ. ಇದರಲ್ಲಿ ಸೆಕ್ಷನ್ 7(ಡಿ) ಅನ್ನು ದುರ್ಬಳಕೆಯ ಕಾರಣದಿಂದ ತೆಗೆದುಹಾಕಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
2013ರಿಂದ 2024ರವರೆಗೆ ಮಂಡನೆಯಾಗಿರುವ 11 ಬಜೆಟ್‌ನಲ್ಲಿ 2.50 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಎಸ್‌ಸಿಎಸ್‌ಪಿ-ಟಿಎಸ್‌ಪಿ ಅಡಿಯಲ್ಲಿ ಮೀಸಲಿಟ್ಟು ಖರ್ಚು ಮಾಡಲಾಗಿದೆ. ಸಮುದಾಯಿಕ ಯೋಜನೆಗಳನ್ನೂ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನವನ್ನು ಬಳಸಲು ಅವಕಾಶವಿದೆ. 2019-20ರಲ್ಲಿ ಮೀಸಲಾಗಿದ್ದ 29,794 ಕೋಟಿ ರೂಗಳಲ್ಲಿ ಬಿಡುಗಡೆಯಾಗಿದ್ದೇ 27,391 ಕೋಟಿ ರೂ ಮಾತ್ರ. ಉಳಿದಂತೆ 2020-21ರಲ್ಲಿ 25,950 ಕೋಟಿ ರೂಗಳಲ್ಲಿ ಶೇ.7.74, 2021-22ನೇ ಸಾಲಿನಲ್ಲಿ 27,021 ಕೋಟಿ ರೂಗಳಲ್ಲಿ ಶೇ.9.67 ಹಾಗೂ 2022-23ನೇ ಸಾಲಿನಲ್ಲಿ ಮೀಸಲಾಗಿದ್ದ 28,234 ಕೋಟಿ ರೂಗಳಲ್ಲಿ ಶೇ.8.54ರಷ್ಟು ಹಣವನ್ನು ಹಿಂದಿನ ಬಿಜೆಪಿ ಸರ್ಕಾರ ಪರಿಭಾವಿತ ವೆಚ್ಚವಾಗಿ ಬಳಸಿದೆ ಎಂದು ವಿವರಿಸಿದರು.
ಬಿಜೆಪಿ, ಜೆಡಿಎಸ್ ಎರಡೂ ಪಕ್ಷ ಅಧಿಕಾರದಲ್ಲಿದ್ದಾಗಲೂ ಈ ಕೆಲಸವನ್ನು ಮಾಡಿವೆ. ಆದರೀಗ, ಗ್ಯಾರಂಟಿಗಳಿಂದ ಜನರಿಗೆ ಅನುಕೂಲವಾಗುತ್ತಿರುವುದನ್ನು ಸಹಿಸಲಾಗಿದೆ, ಸುಳ್ಳು ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಮನಸೋಇಚ್ಛೆ ಮಾತನಾಡಬಾರದು. ಸತ್ಯವನ್ನು ಮಾತ್ರ ಹೇಳಬೇಕಲ್ಲವೇ?. ಬಲಗೈ ಸಮುದಾಯದ ಒಬ್ಬನೇ ಒಬ್ಬ ಶಾಸಕರನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಸಚಿವರಾಗಿ ಮಾಡಲಿಲ್ಲ. ಅದು ಸಮುದಾಯಕ್ಕೆ ಮಾಡಿದ ವಂಚನೆಯಲ್ಲವೇ?. ಎಲ್ಲರಿಗೂ ಅಧಿಕಾರ ಹಂಚಿಕೆ ಸಮನಾಗಿ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದ ಜೆಡಿಎಸ್‌ಗೆ ಜಿಲ್ಲೆಯ ಜನರ ಮತ ಕೇಳುವ ನೈತಿಕ ಹಕ್ಕಿಲ್ಲ. ಆದರೆ, ಜಿಲ್ಲೆಯ ಜನರ ಭವಿಷ್ಯಕ್ಕಾಗಿ ಕಾಂಗ್ರೆಸ್ ಹೋರಾಟ ನಡೆಸುತ್ತಿದೆ. ಜಿಲ್ಲೆಯ ನಾಲೆಗಳ ಆಧುನೀಕರಣಕ್ಕೆ 2008ರಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹಣ ಮಂಜೂರು ಮಾಡಲಾಗಿತ್ತು. ಆದರೆ, ಅದನ್ನು ಎಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆಂದು ಬಿಂಬಿಸಲಾಗುತ್ತಿದೆ. ಸುಳ್ಳನ್ನು ಸತ್ಯವೆಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ಷೇಪಿಸಿದ ಅವರು, ನಾವು ನಾಲೆ ಆಧುನೀಕರಣದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದೆವು. ನಾಲೆಗಳಿಗೆ ನೀರು ಬಿಡುವುದಿಲ್ಲವೆಂದೂ ಪ್ರಕಟಣೆ ಹೊರಡಿಸಿದ್ದೆವು. ಆದರೆ, ಕುಮಾರಸ್ವಾಮಿ ಅವರು ಬರದಲ್ಲೂ ನಾಲೆಗಳ ಆಧುನೀಕರಣ ಮಾಡಲಾಗುತ್ತಿದೆ ಎಂದು ಮಾತನಾಡಿದ್ದಾರೆ. ಇದು ಎಷ್ಟು ಸರಿ?. ಅವರ ಘನತೆಕ್ಕೆ ತಕ್ಕವಾದ ಮಾತಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಮಂಡ್ಯದ ಮೈಶುಗರ್ ಕಾರ್ಖಾನೆಗೆ ನಷ್ಟಕ್ಕೊಳಗಾಗಲು, ನಿಷ್ಕಿಯಗೊಳ್ಳಲು ಯಾರು ಕಾರಣ?. ಚುನಾವಣೆಗಾಗಿ ನಾಲೆಗಳ ಆಧುನೀಕರಣ ಮಾಡಲಾಗಿದೆ ಎಂದು ಆರೋಪಿಸುವ ಪ್ರತಿಪಕ್ಷದವರು ಬೇಕಿದ್ದರೆ ನ್ಯಾಯಾಲಯದ ಮೊರೆ ಹೋಗಲಿ. ಆದರೆ, ಜನರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಮಾಡಬಾರದು ಎಂದು ವಾಗ್ದಾಳಿ ನಡೆಸಿದರು.