ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಆತಂಕ : ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಾಗ್ದಾಳಿ

06Tmk_Cong_PC
Published on

ತುಮಕೂರು: ಉತ್ತರ ಪ್ರದೇಶದ ಲಖಿಂಪುರ ಘಟನೆಯಲ್ಲಿ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಅವರನ್ನು ಬಿಜೆಪಿ ಬಂಧಿಸಿದ್ದು, ಅಧಿಕಾರ ಕಳೆದುಕೊಳ್ಳುವ ಆತಂಕದಿಂದ ಇಂತಹ ಹೋರಾಟ ಹತ್ತಿಕ್ಕುವ ಹುನ್ನಾರಕ್ಕೆ ಮುಂದಾಗಿದ್ದಾರೆ ಎಂದು ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದರು.

ಪ್ರತಿಭಟನಾನಿರತ ರೈತರ ಮೇಲೆ ವಾಹನ ಚಲಾಯಿಸಿ ನಾಲ್ವರು ರೈತರು ಸಾವನ್ನಪ್ಪಿದ್ದನ್ನು ಇಡೀ ಜಗತ್ತೇ ನೋಡಿದೆ. ರೈತ ಕುಟುಂಬಗಳ ನೋವಿಗೆ ಸ್ಪಂದಿಸಲು ತೆರಳಿದ್ದ ಪ್ರಿಯಾಂಕಗಾಂಧಿಯನ್ನು ಬಂಧಿಸಿದ್ದು ಖಂಡನೀಯ. ಮಹಿಳಾ ಪೊಲೀಸರ ಬದಲು ಪುರುಷ ಪೊಲೀಸರೇ ಪ್ರಿಯಾಂಕಾ ಅವರನ್ನು ವಶಕ್ಕೆ ಪಡೆದರು. ಬಂಧಿಸಿದ 24 ಗಂಟೆಯೊಳಗೆ ನ್ಯಾಯಾಲಯದ ಎದುರು ಹಾಜರುಪಡಿಸದೇ ಇರುವುದು ಅಕ್ಷಮ್ಯ ಅಪರಾಧ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಈ ನೆಲದ ಕಾನೂನು ಗೌರವಿಸದ ಬಿಜೆಪಿಯವರಿಗೆ ಪ್ರಿಯಾಂಕಾ ಗಾಂಧಿ ಭಯ ಕಾಡಲು ಆರಂಭಿಸಿದೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ಬಿಜೆಪಿಯವರು ಇಂತಹ ವರ್ತನೆ ತೋರುತ್ತಿದ್ದಾರೆ ಎಂದು ಗುಡುಗಿದರು.

ಅ.3ರ ನೆನಪು: 1972ರ ಅ.3ರಂದು ಇಂದಿರಾಗಾಂಧಿಯವರನ್ನು ಬಂಧಿಸಲಾಗಿತ್ತು. ಈಗ ಪ್ರಿಯಾಂಕಾ ಬಂಧನವಾಗಿದೆ. ಈ ದಿನದ ನೆನಪು ಮಾಸುವುದಿಲ್ಲ. ಲಖಿಂಪುರ ಘಟನೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನೆನಪಿಸುತ್ತದೆ. ಲಕ್ನೋಗೆ ಭೇಟಿ ಕೊಟ್ಟಿದ್ದ ಪ್ರಧಾನಿ ನರೇಂದ್ರ ಮೋದಿ ಸೌಜನ್ಯಕ್ಕೂ ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ನೀಚತನಕ್ಕಿಳಿದಿರುವ ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ ಎಂದರು. ಜಿಲ್ಲಾಧ್ಯಕ್ಷ ಆರ್.ರಾಮಕೃಷ್ಣ, ಮಾಜಿ ಶಾಸಕರಾದ ಎಸ್.ಷಫಿ ಅಹಮ್ಮದ್, ಆರ್.ನಾರಾಯಣ್, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರುಳೀಧರ ಹಾಲಪ್ಪ, ಮುಖಂಡ ಹೊನ್ನಗಿರಿಗೌಡ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮಠ್, ಮರಿಚೆನ್ನಮ್ಮ ಇದ್ದರು.

ಸೋನಿಯಾ-ಸಿದ್ದರಾಮಯ್ಯ ಭೇಟಿ: ಮಾಜಿ ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಸಂದರ್ಭದಲ್ಲಿ ಸೋನಿಯಾಗಾಂಧಿ ಜತೆ ನಡೆಸಿದ ಮಾತುಕತೆ ವಿಚಾರ ನಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ ಡಾ.ಜಿ.ಪರಮೇಶ್ವರ್, ರಾಷ್ಟ್ರರಾಜಕಾರಣಕ್ಕೆ ಸಿದ್ದರಾಮಯ್ಯ ಹೋಗುತ್ತಾರಾ ಎಂಬ ಪ್ರಶ್ನೆಗೆ, ಯಾರು ಬೇಕಾದರೂ ರಾಷ್ಟ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವ ಅವಕಾಶವಿದೆ ಎಂದರು. ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಶ್ರೀನಿವಾಸ ಮಾನೆ, ಸಿಂದಗಿಯಿಂದ ಅಶೋಕ್ ಮನಗೂಳಿ ಗೆಲುವು ನಿಶ್ಚಿತವೆಂದು ಭವಿಷ್ಯ ನುಡಿದರು.

ಬಿಜೆಪಿಗೆ ಧಿಕ್ಕಾರ ಕೂಗಿದ ಮಾಜಿ ಡಿಸಿಎಂ: ಯುವ ಕಾಂಗ್ರೆಸ್ ಪ್ರತಿಭಟನೆ ವಿರೋಧಿಸಿ ಬಿಜೆಪಿ ಪ್ರತಿಭಟನಾ ಮೆರವಣಿಗೆ ಕಾಂಗ್ರೆಸ್ ಕಚೇರಿ ಮುಂದೆ ತೆರಳುವಾಗ ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸುತ್ತಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಬಿಜೆಪಿಗೆ ಧಿಕ್ಕಾರ ಕೂಗಿದರು. ಪ್ರಿಯಾಂಕಾ ಗಾಂಧಿ ಬಂಧನ ವಿರೋಧಿಸಿ ಸೋಮವಾರ ಸಂಜೆ ಪ್ರತಿಭಟನೆ ನಡೆಸಿದ್ದ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕೇಸರಿ ಬಟ್ಟೆಯನ್ನು ಪ್ರತಿಕೃತಿಗೆ ಹೊದಿಸಿ ಸುಟ್ಟು ಹಾಕಿದ್ದನ್ನು ಖಂಡಿಸಿ ಬಿಜೆಪಿ ಎಸ್ಟಿ ಮೋರ್ಚಾ ಹಾಗೂ ನಗರ ಯುವ ಮೋರ್ಚಾ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಇದೇ ವೇಳೆ ಕಾಂಗ್ರೆಸ್ ಕಚೇರಿಯಲ್ಲಿ ಜಿ.ಪರಮೇಶ್ವರ್ ಟಿ.ಬಿ.ಜಯಚಂದ್ರ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಬಿಜೆಪಿ ಕಾರ್ಯಕರ್ತರ ಧಿಕ್ಕಾರ ಘೋಷಣೆಗಳಿಗೆ ಕೆರಳಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಯಾಗಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಧ್ವನಿಗೂಡಿಸಿದ ಪರಮೇಶ್ವರ್ ಮೈಕ್‌ನಲ್ಲಿ ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು.

ಇಂದಿರಾ ಗಾಂಧಿ ಬಂಧಿಸಿದ ದಿನವೇ ಪ್ರಿಯಾಂಕಾ ಗಾಂಧಿಯವರನ್ನು ಬಂಧಿಸಿರುವುದು ಇತಿಹಾಸ ಮರುಕಳಿಸಲಿದೆ. ಬಿಜೆಪಿಯ ಹಿಟ್ಲರ್ ಆಡಳಿತಕ್ಕೆ ಜನ ದಂಗೆ ಏಳಬೇಕು. ಚುನಾವಣೆಯಲ್ಲಿ ಪಾಠ ಕಲಿಸಬೇಕು. ಟಿ.ಬಿ.ಜಯಚಂದ್ರ, ಮಾಜಿ ಸಚಿವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಡಬೇಕು. ವಾಹನ ಚಲಾಯಿಸಿ ರೈತರ ಸಾವಿಗೆ ಕಾರಣನಾದ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ತಕ್ಷಣವೇ ಬಂಧಿಸಬೇಕು. ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕಾದ ಪ್ರತಿಭಟನೆ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿದೆ. ಎಐಸಿಸಿ, ಕೆಪಿಸಿಸಿ ನಿರ್ದೇಶನದಂತೆ ಹೋರಾಟ ಮುಂದುವರಿಸುತ್ತೇವೆ. ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net