

ಮಂಡ್ಯ: ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮದ್ ಖಾನ್ ನೀಡಿರುವ ವಿವಾದಿತ ಹೇಳಿಕೆ ಹಿಂದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೈವಾಡವಿರಬಹುದು ಎಂದು ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಎಚ್.ಡಿ.ಕುಮಾರಸ್ವಾಮಿ ಕುರಿತು ಹೇಳಿಕೆ ನೀಡಿದ್ದಾರೆ. ಈ ಸಂದರ್ಭ ಆ ಮಾತು ಆಡಬಾರದಿತ್ತು. ಅವರಿಬ್ಬರು ಗಳಸ್ಯ ಕಂಠಸ್ಯ. ಆದ್ದರಿಂದ ಜಮೀರ್ ಹೇಳಿಕೆ ಹಿಂದೆ ಕುಮಾರಸ್ವಾಮಿನೆ ಇರಬೇಕು ಎನ್ನಿಸುತ್ತಿದೆ. ಇಬ್ಬರು ಚೆನ್ನಾಗಿದ್ದಾರೆ. ಅದೇ ರೀತಿ ಕುಮಾರಸ್ವಾಮಿಗೆ ಹೇಳಿಸಿ ಅಭ್ಯಾಸವಿರುವುದರಿಂದ ಜಮೀರ್‌ರಿಂದ ಹೇಳಿಸಿರಬಹುದು. ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ ಆಫರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಒಬ್ಬ ಶಾಸಕರನ್ನ ಯಾರು ಕೊಂಡುಕೊಳ್ಳುವುದಕ್ಕೆ ಆಗಲ್ಲ. ಬಿಜೆಪಿ ಮತ್ತು ಜೆಡಿಎಸ್‌ನವರೇ 50 ಕೋಟಿ ರೂ ಆಫರ್ ಬಗ್ಗೆ ಹೇಳುತ್ತಿದ್ದಾರೆ. ಉಪ ಚುನಾವಣೆ ಬಳಿಕ ಸರ್ಕಾರ ಬಿದ್ದೊಗುತ್ತೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹೇಳಿದ್ದಾರೆ. ಈ ಪಕ್ಷದಲ್ಲಿ ಒಬ್ಬರಿಗೆ ಸರ್ಕಾರ ಬೀಳಿಸಿ, ಇನ್ನೊಬ್ಬರಿಗೆ ಬೀಳಿಸಲು ಪ್ರಯತ್ನ ನಡೆಸಿ ಅಭ್ಯಾಸವಿದೆ. ನನಗೆ ಯಾರು ಆಫರ್ ಕೊಟ್ಟಿಲ್ಲ. ನಮ್ಮದು ಭದ್ರ ಕೋಟೆ ಎಂದರು.
ಸಚಿವ ಚಲುವರಾಯಸ್ವಾಮಿ, ಮುಖಂಡ ಕೀಲಾರ ಜಯರಾಂ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಗಲಾಟೆ ಬಗ್ಗೆ ಜಯರಾಂ ಅವರು ಹೇಳಿದ್ದಾರಾ?. ಚಲುವರಾಯಸ್ವಾಮಿ ಕೂಡ ಘಟನೆ ಏನು ನಡೆದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಇದೆಲ್ಲ ಅಪಸ್ತುತ. ರಾಜ್ಯದಲ್ಲಿ ಸಚಿವರಿಗೆ ರಕ್ಷಣೆ ಇಲ್ಲ ಮಾಜಿ ಶಾಸಕ ಸುರೇಶ್‌ಗೌಡ ಹೇಳಿದ್ದು, ಅವರಿಗೆ ಧನ್ಯವಾದ ಎಂದು ವ್ಯಂಗ್ಯವಾಡಿದರು.