

ಉಡುಪಿ: ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೆ ಜೀವಾಳ. ಕಾರ್ಯಕರ್ತರನ್ನು ಕಡೆಗಣಿಸುವುದಿಲ್ಲ. ಮುಂದಿನ ಭೇಟಿ ವೇಳೆ ಒಂದು ಗಂಟೆ ಕಾರ್ಯಕರ್ತರ ಅಹವಾಲು ಸ್ವೀಕಾರ ಮತ್ತು ಭೇಟಿಗೆ ಸಮಯ ಮೀಸಲಿಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಶನಿವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಉಸ್ತುವಾರಿ ಸಚಿವ ಸ್ಥಾನ ಲಭಿಸಿದ ಬಳಿಕ ಜಿಲ್ಲೆಗೆ ಇದುವರೆಗೂ 19 ಬಾರಿ ಭೇಟಿ ನೀಡಿದ್ದೇನೆ. ಕಾಂಗ್ರೆಸ್ ಒಂದು ಕುಟುಂಬ, ಒಂದು ಪರಿವಾರ ಇದ್ದಂತೆ. ನಾನೆಂದೂ ಕಾರ್ಯಕರ್ತರ ಪರ, ಅಧಿಕಾರ ಬರುತ್ತೆ, ಹೋಗುತ್ತದೆ ಎಂದರು.
2013ರ ವಿಧಾನಸಭೆ, 2014ರ ಲೋಕಸಭಾ ಚುನಾವಣೆಯಲ್ಲಿ ಸೋತರೂ ಎದೆಗುಂದದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ 52 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ. 2023ರಲ್ಲಿ 56 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದರು. ಉಡುಪಿ ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಸೋತಿರಬಹುದು. ಆದರೆ ಎದೆಗುಂದದೆ ಎಲ್ಲರೂ ಒಗ್ಗೂಡಿ ಪಕ್ಷ ಕಟ್ಟಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಿದರು.
ಆರೋಪಿಗಳ ರಕ್ಷಣೆ ಇಲ್ಲ
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಕಳಪೆ ಕಾಮಗಾರಿ ವಿಚಾರವಾಗಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾರಿಗೂ ಅನುಮಾನ ಬೇಡ. ಮುಖ್ಯಮಂತ್ರಿಗಳು ತೀಮಾರ್ನ ಕೈಗೊಳ್ಳುತ್ತಾರೆ ಎಂದರು.
ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮುಖಂಡರಾದ ಪ್ರಸಾದ್ ಕಾಂಚನ್, ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.