ಕೆ.ಷಡಕ್ಷರಿ ಮೇಲೆ ಡಿಕೆಶಿ ಮುನಿಸು ; ಡಿಜಿಟಲ್ ಸದಸ್ಯತ್ವಕ್ಕೆ ನಿರಾಸಕ್ತಿ, ಪಕ್ಷ ಸಂಘಟನೆಯಾದರಷ್ಟೇ ಟಿಕೆಟ್

01
Published on

ತಿಪಟೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ವಿಭಾಗೀಯ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ತಾಲೂಕು ಕಾಂಗ್ರೆಸ್ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು.

ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಉಪವಿಭಾಗದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮಾಜಿ ಶಾಸಕ ಕೆ.ಷಡಕ್ಷರಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುವ ಮೂಲಕ ಮಂದಿನ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ಎಂಬ ಸಂದೇಶ ರವಾನಿಸಿದರು.

ಪ್ರಸ್ತುತ ಬಿಜೆಪಿ ಸರ್ಕಾರದ ಬಗ್ಗೆ ಮಾತಾಡುವುದು ವ್ಯರ್ಥ, ಭದ್ರ ಬುನಾದಿಯ ಮನೆ ಕಟ್ಟುವ ಅಗತ್ಯವಿದೆ. ದೇಶದಲ್ಲಿ ಡಿಜಿಟಲ್ ಸದಸ್ಯತ್ವ ನೋಂದಣಿ ಆಗುತ್ತಿರುವುದು ಕ್ರಾಂತಿ ಸೃಷ್ಟಿಸಿದೆ. ಖುದ್ದು ಸೋನಿಯಾಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ರಾಜ್ಯಾಧ್ಯಕ್ಷನಾದ ನಾನೇ ವ್ಯಾಟ್ಸ್ ಆ್ಯಪ್ ಸಂದೇಶ ನೀಡಲು ಈ ಅಭಿಯಾನ ನೆರವಾಗಲಿದೆ ಎಂದರು.

ಪ್ರತೀ ಬೂತ್‌ಗಳಿಗೂ ಮತಪಟ್ಟಿ ಕೊಟ್ಟು, ತಲಾ 2-3 ನೋಂದಣಿದಾರರನ್ನು ನೇಮಿಸಿ, ಯಾರು 250ಕ್ಕೂ ಹೆಚ್ಚು ನೋಂದಣಿ ಮಾಡುತ್ತಾರೋ ಅಂತಹವರಿಗೆ ನಾನೇ ವಿಶೇಷ ಬಹುಮಾನ ಕೊಡುತ್ತೇನೆ. ಇನ್ನು ಮುಂದೆ ಬೂತ್, ಬ್ಲಾಕ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ನಾನೂ ಸೇರಿ ನೋಂದಣಿ ಆದವರು ಚುನಾವಣೆ ಮೂಲಕ ಹುದ್ದೆಗೆ ಆಯ್ಕೆ ಆಗಲಿದ್ದಾರೆ ಎಂದು ಹೇಳಿದರು.

ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಕೆ.ಷಡಕ್ಷರಿ, ಎಂ.ಡಿ.ಲಕ್ಷ್ಮೀನಾರಾಯಣ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಮುರಳೀಧರ ಹಾಲಪ್ಪ, ಮುಖಂಡರಾದ ಟೂಡಾ ಶಶಿಧರ್, ಕೆ.ಟಿ.ಶಾಂತಕುಮಾರ್, ಲೋಕೇಶ್ವರ್, ರಾಯಸಂದ್ರ ರವಿಕುಮಾರ್, ಬ್ಲಾಕ್ ಅಧ್ಯಕ್ಷ ಎಂ.ಎನ್.ಕಾಂತರಾಜು, ನಗರಾಧ್ಯಕ್ಷ ಟಿ.ಎನ್.ಪ್ರಕಾಶ್, ವಕ್ತಾರ ವಿ.ಯೋಗೀಶ್, ಎನ್.ಎಂ.ಸುರೇಶ್, ನಿಖಿಲ್ ರಾಜಣ್ಣ, ಜಿ.ಎಸ್.ಶಿವಸ್ವಾಮಿ, ಎಂ.ಡಿ.ರವಿಕುಮಾರ್ ಮತ್ತಿತರರು ಇದ್ದರು.

‘ಕೈ’ ಹಿಡಿದ ಲೋಕೇಶ್ವರ್!: ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಬಿಜೆಪಿ ತೊರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಲೋಕೇಶ್ವರ ಜತೆಗೆ ನಗರಸಭಾ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರಾದ ಹಸೀನಾ ಭಾನು, ಯಮುನಾ ಧರಣೇಶ್, ಭಾರತಿ ಮಂಜುನಾಥ್, ಟಿಎಪಿಸಿಎಂಎಸ್ ನಿರ್ದೇಶಕ ಟಿ.ಎಸ್.ಬಸವರಾಜು ಮತ್ತಿತರರ ಮುಖಂಡರು ಸೇರ್ಪಡೆಯಾಗಿದ್ದು ತಾಲೂಕಿನಲ್ಲಿ ಕಾಂಗ್ರೆಸ್‌ಗೆ ಬಲ ಬಂದಂತಾಗಿದೆ.

ಕಾಂಗ್ರೆಸ್ ಸದಸ್ಯತ್ವ ಪಡೆಯದ ಕೆ.ಷಡಕ್ಷರಿ!: ತಿಪಟೂರು ತಾಲೂಕಿನಲ್ಲಿ ಸದಸ್ಯತ್ವ ಅಭಿಯಾನದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಡಿಕೆಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್.ಕಾಂತರಾಜು ಕೇವಲ 15, ನಗರಾಧ್ಯಕ್ಷ ಟಿ.ಎನ್.ಪ್ರಕಾಶ್ 35 ಸದಸ್ಯತ್ವ ನೋಂದಣಿ ಮಾಡಿದ್ದಾರೆ, ಇನ್ನೂ ಕೆಲವರು ಖಾತೆಯನ್ನೇ ತೆರೆದಿಲ್ಲ. ವಿಶೇಷವಾಗಿ ಮಾಜಿ ಶಾಸಕ ಕೆ.ಷಡಕ್ಷರಿಯೇ ಇಲ್ಲಿವರೆಗೂ ನೋಂದಣಿ ಮಾಡಿಸಿಲ್ಲ ಎಂದು ಗರಂ ಆದರು. 50 ಸಾವಿರಕ್ಕೂ ಹೆಚ್ಚು ನೋಂದಣಿ ಮಾಡಿಸದಿದ್ದರೆ ತಿಪಟೂರಿನಲ್ಲಿ ಪರ್ಯಾಯ ನಾಯಕರನ್ನು ಹುಡುಕಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗ ಸಭೆಯಲ್ಲಿಯೇ ಹೇಳಿದ್ದು ಕಾಂಗ್ರೆಸ್ ವಲಯದಲ್ಲಿ ಹೊಸ ಊಹಾಪೋಹಕ್ಕೂ ಕಾರಣವಾಗಿದೆ.

ಪರಮೇಶ್ವರ ಕೇರಳದಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಆದರೆ, ಅವರ ಪಕ್ಕದ ತಾಲೂಕಿನಲ್ಲಿಯೇ ಜಾಗಟೆ ಹೊಡೆದುಕೊಂಡು ಕೂತಿದ್ದಾರೆ. ಷಡಕ್ಷರಿ ಸದಸ್ಯತ್ವ ನೋಂದಣಿ ಮಾಡದಿದ್ದರೆ ತಿಪಟೂರಿನಲ್ಲಿ ಬೇರೆಯವರಿಗೆ ಅವಕಾಶ ನೀಡುತ್ತೇನೆ, ಕೆ.ಷಡಕ್ಷರಿ ಸದಸ್ಯತ್ವವನ್ನೇ ಪಡೆದಿಲ್ಲ, ಎಲ್ಲರೂ ಖಾಲಿ ಜಾಗಟೆ ಹೊಡೆದುಕೊಂಡು ಓಡಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಈ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಐಕ್ಯತೆಯ ಸಂಕೇತವಾದ ಕಾಂಗ್ರೆಸ್ ಸದಸ್ಯತ್ವ ದೇಶದ ಜನರ ಸಮಾನತೆ ಮತ್ತು ನಂಬಿಕೆಯ ಸಂಕೇತ. ಮಿಗಿಲಾಗಿ ಕಾಂಗ್ರೆಸ್ ಸದಸ್ಯತ್ವ ಪಡೆಯುವುದೇ ಒಂದು ಹೆಮ್ಮೆಯ ವಿಷಯ. ಬಿಜೆಪಿ ಸರ್ಕಾರದ ನಡೆಗಳನ್ನು ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯ ಮುಂದಿಡಲಾಗುವುದು. ಟಿ.ಬಿ.ಜಯಚಂದ್ರ ಮಾಜಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net