

ನರಸಾಪುರ : ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಕೆಲವರು ಪಕ್ಷದಲ್ಲಿ ಗೆದ್ದು, ಅಧಿಕಾರಕ್ಕಾಗಿ ಪಕ್ಷಾಂತರವಾಗುತ್ತಿದ್ದಾರೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಟೀಕಿಸಿದರು.
ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಬಳಿ ಶುಕ್ರವಾರ ಗ್ರಾಪಂ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೋಲಾರ ತಾಲೂಕಿನಲ್ಲಿ 23 ಪಂಚಾಯಿತಿಗಳಿದ್ದು, ಅದರಲ್ಲಿ ಕುರುಗಲ್ ಮತ್ತು ವೇಮಗಲ್ ಪಟ್ಟಣ ಪಂಚಾಯಿತಿಗಳಾಗಿವೆ. ಇನ್ನುಳಿದ 21 ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕಲ್ಲುಗಳಾಗಿರುವ ಕಾರ್ಯಕರ್ತರಿಗೆ ಒಳ್ಳೆಯ ಮೇಸ್ತಿŠ ರೆಡಿ ಮಾಡಿ ಕೊಡುತ್ತೇವೆ. ಪಕ್ಷಕ್ಕೆ ಭದ್ರ ಬುನಾದಿ ಹಾಕಿ ಎಂದರು.
ಪಕ್ಷದಿಂದ ಯಾರೇ ಹೋಗಲಿ ಬಿಡಲಿ, ನಿಮ್ಮ ಜತೆಗೆ ನಾವಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು. ಗ್ರಾಪಂ ಚುನಾವಣೆ ಮುಗಿಯುವ ತನಕ ಕೋಲಾರದಲ್ಲೇ ಇರುತ್ತೇನೆ ಎಂದರು.
ಬಿಜೆಪಿಯಲ್ಲಿ ಆಂತರಿಕ ಕಲಹ ಉಂಟಾಗಿದ್ದು, ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಇಳಿಸಲು ಅವರದ್ದೇ ಪಕ್ಷದವರು ಕಾದುಕುಳಿತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ ಸರ್ಕಾರ, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಟೀಕಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಾರೆಡ್ಡಿ ಮಾತನಾಡಿ, ಪ್ರತಿಯೊಬ್ಬರೂ ಧೈರ್ಯವಾಗಿ ಚುನಾವಣೆ ಎದುರಿಸೋಣ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಗೆ ಒಂದು ತಂಡ ರಚಿಸಿ, ಅದರ ಮೂಲಕ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದರು.
ಕೋಲಾರ ಜಿಲ್ಲಾ ಕಿಸಾನ್ ಕೇತ್ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ, ಕಳೆದ 30 ವರ್ಷಗಳಿಂದ ತಾಲೂಕಿನಲ್ಲಿ ಮೂಲ ಕಾಂಗ್ರೆಸ್ ಶಾಸಕರನ್ನು ನೋಡಲು ಆಗಲಿಲ್ಲ. ಕೋಲಾರ ಕ್ಷೇತ್ರದ ಎಂಎಲ್ಎ ಅಭ್ಯರ್ಥಿಯನ್ನು ಆದಷ್ಟು ಬೇಗನೆ ಸೂಚಿಸಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಜನರಿಗೆ ತಿಳಿಸಿ ಪ್ರಚಾರ ಮಾಡಬೇಕು ಎಂದರು.
ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಕೋಲಾರ ತಾಲೂಕಿನ ಎಲ್ಲ ಗ್ರಾಪಂ ಕಾರ್ಯಕರ್ತರ, ಮುಖಂಡರ ಅಭಿಪ್ರಾಯ ಮತ್ತು ಸಲಹೆಗಳನ್ನು ನಾಯಕರು ಪಡೆದರು. ಕೋಲಾರ ನಗರಸಭೆ ಸದಸ್ಯ ಮುಬಾರಕ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯ್ ಶಂಕರ್, ಮುಖಂಡರಾದ ಅರಹಳ್ಳಿ ಗೋಪಾಲಕೃಷ್ಣ ಮತ್ತಿತರರು ಇದ್ದರು.