ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ

congrs pranalike
Published on

ಮಡಿಕೇರಿ: ಕೊಡಗು ಮತ್ತು ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್‌ರವರು ನಗರದಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು.


ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಮೈಸೂರು-ಕೊಡಗು ರೈಲು ಸಂಪರ್ಕ, ಐಟಿ-ಬಿಟಿ ಕಂಪೆನಿಗಳಲ್ಲಿ ಕೊಡಗಿನವರಿಗೆ ಆದ್ಯತೆ, ಸಮಗ್ರ ನೀರು ಸರಬರಾಜು ವ್ಯವಸ್ಥೆ, ಮಡಿಕೇರಿಯಲ್ಲಿ ವೈದ್ಯಕೀಯ ಟ್ರಾಮಾ ಕೇಂದ್ರ ಸ್ಥಾಪನೆ, ಸೋಮವಾರಪೇಟೆಯಲ್ಲಿ ಟೆಕ್ನಾಲಜಿ ಪಾರ್ಕ್, ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಮಸ್ಯೆಗೆ ಪರಿಹಾರ, ಮಡಿಕೇರಿಯಲ್ಲಿ ಮಿನಿ ಏರ್‌ಪೋರ್ಟ್, ಯೋಗ ಶಾಲೆಗಳ ಸ್ಫಾಪನೆ, ಕ್ರೀಡಾಭಿವೃದ್ಧಿ ಪ್ರಾಧಿಕಾರ ಪ್ರಾರಂಭ, ಹುಣಸೂರಿನಲ್ಲಿ ಸೆಂಟ್ರಲ್ ಯೂನಿವರ್ಸಿಟಿ ಸ್ಥಾಪನೆ, ಗೋಣಿಕೊಪ್ಪಲುವಿನಲ್ಲಿ ಕಾಫಿ ರಫ್ತು ಕೇಂದ್ರ ಸೇರಿದಂತೆ ವಿವಿಧ ಯೋಜನೆಗಳ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ ಎಂದು ಅಭ್ಯರ್ಥಿ ಎಂ.ಲಕ್ಷ್ಮಣ್ ಹೇಳಿದರು.


ಈ ಬಾರಿ ಕಾಂಗ್ರೆಸ್ ೨೫ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದು, ಕಾಂಗ್ರೆಸ್ ನುಡಿದಂತೆ ನಡೆಯುವ ಮೂಲಕ ಬದ್ಧತೆ ಮೆರೆಯಲಿದೆ ಎಂದರಲ್ಲದೇ, ಕಳೆದ ಅವಧಿಯಲ್ಲಿ ಸಂಸದರಾಗಿದ್ದ ಪ್ರತಾಪಸಿಂಹ ಈ ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನೆಂದು ಬಹಿರಂಗಪಡಿಸಲಿ. ಪ್ರತಾಪ್ ಸಿಂಹ ಅವರಿಗೆ ಮತ್ತೊಮ್ಮೆ ಸ್ಪರ್ಧಿಸಲು ಟಿಕೆಟ್ ಸಿಗದಿರುವುದಕ್ಕೆ ಕಾರಣವೇನು ಎಂದೂ ಲಕ್ಷ್ಮಣ್ ಪ್ರಶ್ನಿಸಿದರು.


ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಕೊಡಗಿಗೆ ಯಾವ ಯೋಜನೆ ಕೊಡುತ್ತೀರಿ ಎಂಬ ಪ್ರಶ್ನೆಗೆ ಬಿಜೆಪಿಯವರಲ್ಲಿ ಉತ್ತರವಿಲ್ಲ. ಜನ ಸಾಮಾನ್ಯರೊಂದಿಗೆ ಬೆರೆಯುವ ಗುಣವಿರುವ ಲಕ್ಷ್ಮಣ್ ಗೆಲ್ಲಿಸುವ ಮೂಲಕ ಮತದಾರರು ಮತ್ತೊಮ್ಮೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಮತದಾರರ ಮನ ಗೆದ್ದಿದ್ದು, ಈ ಬಾರಿಯೂ ಕಾಂಗ್ರೆಸ್ ಅಧಿಕ ಮತಗಳಿಂದ ಗೆಲವು ಸಾಧಿಸಲಿದೆ ಎಂದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ದೂರದೃಷ್ಟಿಯುಳ್ಳ ಉತ್ತಮ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಮತದಾರರು ಯೋಗ್ಯರನ್ನು ಸಂಸತ್ತಿಗೆ ಕಳುಹಿಸಬೇಕೆಂದು ಕೋರಿದರು.


ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ಪ್ರಚಾರ ಸಮಿತಿ ಪ್ರಮುಖರಾದ ಟಿ.ಪಿ.ರಮೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net