

ಮಂಡ್ಯ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ಮುಕ್ತ ದಕ್ಷಿಣ ಭಾರತ ನಿರ್ಮಾಣವಾಗಲಿದೆ ಎಂದು ಎಐಸಿಸಿ ವಕ್ತಾರೆ ಅಲ್ಕಾ ಲಂಬಾ ಹೇಳಿದರು.
ಯುವನಾಯಕ ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಗೆ ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆತಂತೆ ಮಂಡ್ಯದಲ್ಲೂ ಅಪಾರವಾದ ಜನಸ್ಪಂದನೆ ದೊರೆತಿದೆ. ಆದ್ದರಿಂದ ಈ ಸಲ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಮಿತಿ ಮೀರಿದ ಭಷ್ಟಾಚಾರ, ಶೇ.40ರಷ್ಟು ಕಮಿಷನ್‌ನಿಂದಾಗಿ ಜನತೆ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಸೋಲುವ ಭೀತಿಯಿಂದ ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಸಚಿವ ಅಮಿತ್ ಷಾ ಹಾಗೂ ಯುಪಿ ಸಿಎಂ ಯೋಗಿ ಅದಿತ್ಯನಾಥ ಅವರನ್ನು ಕರೆ ತಂದು ಪ್ರಚಾರ ನಡೆಸುತ್ತಿದೆ. ಆದರೆ ಬಿಜೆಪಿ ಯಾವುದೇ ತಂತ್ರ ಮಾಡಿದರೂ ಜಿಲ್ಲೆಯ ಜನರು ಅದಕ್ಕೆ ಸೊಪ್ಪು ಹಾಕುವುದಿಲ್ಲ. ಇಲ್ಲಿನ ಜನತೆ ಜಾತ್ಯಾತೀತ ಮನೋಭಾವದವರಾಗಿದ್ದು, ಇಂತಹ ಜನರ ಮನಸ್ಸಿನಲ್ಲಿ ಕೋಮುವಾದವನ್ನು ಬಿತ್ತಲು ಸಾಧ್ಯವಿಲ್ಲ ಎಂದರು.
ವಕ್ತಾರ ಎ.ಎನ್.ನಟರಾಜ್‌ಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಇತರರಿದ್ದರು.