

ಲೋಕಸಭೆ ಚುನಾವಣೆ ಹತ್ತಿರವಾದಂತೆ ಜಿಲ್ಲೆಯಲ್ಲಿ ರಾಜಕೀಯ ರಂಗೇರುತ್ತಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ.ಸುರೇಶ್ ಘೋಷಣೆ ಆಗಿದ್ದು, ಮೈತ್ರಿ ಪಕ್ಷದಲ್ಲಿ ಇನ್ನೂ ರಣ ಕಲಿಯ ಹುಡುಕಾಟ ಮುಂದುವರಿದಿದೆ.
ಇದರ ನಡುವೆ ಈ ಬಾರಿ ಕ್ಷೇತ್ರವನ್ನು ಉಳಿಸಿಕೊಳ್ಳಲೇ ಬೇಕಾದ ಅನಿವಾರ್ಯತೆಗೆ ಸಿಲುಕಿರುವ ಕಾಂಗ್ರೆಸ್ ಪಾಳಯ ಪ್ರತಿ ಪಕ್ಷದ ಮುಖಂಡರನ್ನು ಸೆಳೆಯಲು ಈಗಾಗಲೇ ಆಪರೇಷನ್ ಹಸ್ತ ಆರಂಭಿಸಿದ್ದು, ಚುನಾವಣೆ ಘೋಷಣೆ ಆಗುತ್ತಿದ್ದಂತೆ ಅವರನ್ನು ಪಕ್ಷಕ್ಕೆ ಸ್ವಾಗತಿಸಲು ವೇದಿಕೆ ಸಿದ್ಧ ಮಾಡಿಕೊಂಡಿದೆ.
ಬೆಂಗಳೂರು ನಗರದ ಮೂರು, ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರ ಮತ್ತು ರಾಮನಗರ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ 5 ಎಂಎಲ್ಎಗಳನ್ನು ಹೊಂದಿದ್ದರೂ ಮೋದಿ ಅಲೆಯಲ್ಲಿ ಯಡವಟ್ಟು ಮಾಡಿಕೊಳ್ಳುವ ಅವಕಾಶ ನೀಡಬಾರದು ಎನ್ನುವ ಕಾರಣಕ್ಕೆ ಜಿಲ್ಲೆಯ ರಾಮನಗರ, ಚನ್ನಪಟ್ಟಣ ಮತ್ತು ಮಾಗಡಿ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ನ ಮುಖಂಡರಿಗೆ ಗಾಳ ಹಾಕಿದೆ. ಇದರ ಪ್ರಯತ್ನದ ಭಾಗವಾಗಿ ಈಗಾಗಲೇ ಕೆಲವು ಮುಖಂಡರು ಆಯಾ ಪಕ್ಷದಿಂದ ಒಂದು ಕಾಲು ಹೊರಗೆ ಇಟ್ಟಿದ್ದು, ಚುನಾವಣೆ ಘೋಷಣೆ ನಂತರ ಕಾಂಗ್ರೆಸ್ ಮನೆ ಪ್ರವೇಶ ಮಾಡಲು ಸಿದ್ಧಗೊಂಡಿದ್ದಾರೆ.
ಅಣ್ಣಾ ಮಾತಾಡ್ತಾರೆ!: ಈಗಾಗಲೇ ಚನ್ನಪಟ್ಟಣ ಬಿಜೆಪಿ ಮುಖಂಡ ಮಲವೇಗೌಡ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅದೇ ರೀತಿ ಮತ್ತಷ್ಟು ಬಿಜೆಪಿ ಮುಖಂಡರೊಂದಿಗೆ ಮಾತುಕತೆಯಾಗಿದೆ. ಇನ್ನು ರಾಮನಗರ ಮತ್ತು ಮಾಗಡಿಯಲ್ಲಿ ಬಿಜೆಪಿ, ಜೆಡಿಎಸ್ ಮುಖಂಡರನ್ನು ಸಂಪರ್ಕ ಮಾಡುವ ಸ್ಥಳೀಯ ಕಾಂಗ್ರೆಸ್ ಮುಖಂಡರು ಮನವೊಲಿಸುವ ಪ್ರಯತ್ನ ಮಾಡಿ, ಅಂತಿಮವಾಗಿ ಅಣ್ಣಾ ಮಾತಾಡ್ತಾರೆ ಎಂದು ನೇರವಾಗಿ ಡಿ.ಕೆ.ಸುರೇಶ್ ಅವರೊಟ್ಟಿಗೆ ಮೊಬೈಲ್ನಲ್ಲಿ ಮಾತನಾಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇದರಲ್ಲಿ ಕೆಲವರು ಸುರೇಶ್ ಅವರ ಭರವಸೆಗಳಿಗೆ ಒಪ್ಪಿದರೆ, ಮತ್ತೆ ಕೆಲವರು ಪಾರ್ಟಿ ಬಿಡುವ ಮಾತೇ ಇಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಪ್ರಾಧಿಕಾರಗಳಿಗೂ ನೇಮಕ
ಚುನಾವಣೆ ಘೋಷಣೆಗೂ ಮುನ್ನವೇ ಬೆಂಬಲಿಗ ಪಡೆಗೆ ಅಧಿಕಾರ ನೀಡುವ ಮೂಲಕ ಸಂಘಟನೆಯನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುವ ಕೆಲಸ ಸಂಸದ ಡಿ.ಕೆ.ಸುರೇಶ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಮಾಗಡಿ ಯೋಜನಾ ಪ್ರಾಧಿಕಾರ, ಚನ್ನಪಟ್ಟನ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ರಾಮನಗರ, ಕನಕಪುರ ಪ್ರಾಧಿಕಾರಗಳಿಗೆ ಇನ್ನೂ ಯಾರನ್ನೂ ನೇಮಕ ಮಾಡಿಲ್ಲವಾದರೂ ಚುನಾವಣೆ ಘೋಷಣೆಗೂ ಮುನ್ನವೇ ಇವುಗಳ ಸಾರಥಿಗಳ ನೇಮಕ ನಡೆಯಲಿದೆ. ಒಟ್ಟಾರೆಯಾಗಿ, ಲೋಕಸಭೆ ಚುನಾವಣೆಯನ್ನು ಎದುರಿಸಲು ಒಂದು ಹಂತದ ತಯಾರಿಯನ್ನು ಪೂರ್ಣಗೊಳಿಸಿದ್ದರೆ, ಮೈತ್ರಿ ಪಕ್ಷ ಇನ್ನೂ ನಿದ್ರೆಗಣ್ಣಿನಲ್ಲಿಯೇ ಇದೆ.
ಆತಂಕದಲ್ಲಿ ಮೈತ್ರಿ ಕಾರ್ಯಕರ್ತರು
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರಕ್ಕೆ ಕೈನಿಂದ ಡಿ.ಕೆ.ಸುರೇಶ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಅಲ್ಲದೆ, ಕಳೆದ ಹಲವು ತಿಂಗಳಿಂದಲೂ ಸುರೇಶ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಜೆಡಿಎಸ್ - ಮೈತ್ರಿ ಅಭ್ಯರ್ಥಿ ಇನ್ನೂ ಅಂತಿಮಗೊಳ್ಳದೇ ಇರುವುದು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಆತಂಕ ತರಿಸಿದೆ. ಜಯದೇವ ಹೃದ್ರೋಗ ಸಂಸ್ಥೆಯ ನಿರ್ಗಮಿತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಸ್ಪರ್ಧೆ ಮಾಡಲು ಒಪ್ಪದಿದ್ದರೆ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲ. ಒಂದೆಡೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ, ಇದೇ ಒತ್ತಡ ಇತರ ಸ್ಥಳೀಯ ನಾಯಕರಿಂದಲೂ ಇದೆ. ಆದರೆ, ಈ ಆಹ್ವಾನ ಸ್ವೀಕರಿಸಲು ಸಿದ್ಧರಿಲ್ಲದ ಯೋಗೇಶ್ವರ್, ನನಗೆ ರಾಜ್ಯ ರಾಜಕಾರಣ ಬಿಟ್ಟು ಹೋಗಲು ಇಷ್ಟವಿಲ್ಲ ಎನ್ನುವ ಸಂದೇಶ ಸಾರುತ್ತಿದ್ದಾರೆ. ಇದು ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ. ಆದರೆ, ಇನ್ನೆರಡು ದಿನಗಳಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಬಹುತೇಕ ಪೂರ್ಣಗೊಳ್ಳಲಿದೆ ಎನ್ನುವ ಪಕ್ಷದ ನಾಯಕರ ಹೇಳಿಕೆಗಳು ಸಮಾಧಾನ ತಂದಿದೆ.