

ಕುಶಾಲನಗರ:
ಬಿಜೆಪಿ ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಡವಾಗಿದ್ದು ಸಂವಿಧಾನದ ಮೂಲಕ ಪಡೆದುಕೊಂಡಿರುವ ಸಮಾನತೆಯನ್ನು ದೂರಮಾಡುವುದೇ ಇವರ ಉದ್ದೇಶ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಕುಶಾಲನಗರದಲ್ಲಿ ಭಾನುವಾರ ಸಂಜೆ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಶ್ರೀಮಂತರ ಪಕ್ಷ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರು ಬಡವರಾಗೇ ಉಳಿದಿದ್ದಾರೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ. ಚುನಾವಣೆಯಲ್ಲಿ ಜನರ ಬದುಕಿನ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕು. ಆದರೆ ಬರೀ ಧರ್ಮಗಳ ಬಗ್ಗೆ ಮಾತಾಡಲಾಗುತ್ತಿದೆ. ನ್ಯಾಯಾಲಯ ಕೂಡ ಬಿಜೆಪಿ ಪರ ಕೆಲಸ ಮಾಡುವ ಸ್ಥಿತಿ ನಿರ್ಮಾಣ ಆಗಿದೆ. ಎಲ್ಲಾ ಸ್ವತಂತ್ರ ಧ್ವನಿಗಳನ್ನೂ ಅಡಗಿಸಲಾಗುತ್ತಿದೆ. 400ಕ್ಕೂ ಹೆಚ್ಚು ಸೀಟುಗಳನ್ನು ಪಡೆಯಲು ಎಲ್ಲಾ ರೀತಿಯ ಪ್ರಯತ್ನ ಬಿಜೆಪಿಯಿಂದ ನಡೆದಿದೆ. 400 ಸೀಟುಗಳು ಬಂದರೆ ಸಂವಿಧಾನ ಬದಲಿಸಲಾಗುವುದು ಎಂದು ಅನಂತ ಕುಮಾರ್ ಹೆಗಡೆ ಹೇಳಿದ್ದಾರೆ. ಇದೇ ಬಿಜೆಪಿಯ ಒಳಧ್ವನಿ ಆಗಿದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಚಿಂತನೆ ಮೂಲಕ ಒಕ್ಕೂಟ ವ್ಯವಸ್ಥೆ ಹಾಳು ಮಾಡಲು ಷಡ್ಯಂತರ ನಡೆದಿದೆ. ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ ಬಿಜೆಪಿ ಎಂಪಿಗಳಿಲ್ಲ. ಇವರೆಲ್ಕಾ ಬಟ್ಟಂಗಿಗಳು.ಗೆಲುವಿಗಾಗಿ ಮೋದಿ ಹೆಸರು ಹೇಳುತ್ತಿದ್ದಾರೆ.
ರೈತರ ಆದಾಯ ದುಪ್ಪಟ್ಟು ಮಾಡಲಾಗುತ್ತದೆ ಎನ್ನುವ ಆಶ್ವಾಸನೆ ಬಿಜೆಪಿ ಸರ್ಕಾರ ಕೊಟ್ಟಿತ್ತು. ಆದರೆ ಅದು ಈಡೇರಲಿಲ್ಲ. ಅತಿ ಹೆಚ್ಚು ನಿರುದ್ಯೋಗ ಮೋದಿ ಸರ್ಕಾರದ ಅವಧಿಯಲ್ಲಿ ಸೃಷ್ಟಿಯಾಗಿದೆ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಶೇ. 10 ಕೂಡ ಭರವಸೆ ಈಡೇರಿಸಿಲ್ಲ. ಮೋದಿ ಸರ್ಕಾರದಲ್ಲಿ ಬಡವರು, ಜನ ಸಾಮಾನ್ಯರು ಬದುಕಲು ಕಷ್ಟವಾಗಿದೆ. ಬಡವರಿಂದ ಹಣ ಕಿತ್ತು ಶ್ರೀಮಂತರಿಗೆ ಕೊಡಲಾಗುತ್ತಿದೆ ಎಂದರು.
ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಚುನಾವಣೆ ಸಮಯದಲ್ಲಿ ಕೊಟ್ಟಿದ್ದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಸಿದ್ದರಾಮಯ್ಯ ಸರ್ಕಾರದಲ್ಲಿ ಅನುಷ್ಠಾನಕ್ಕೆ ಬಂದಿದೆ. ಹಾಗಾಗಿ ಕಾರ್ಯಕರ್ತರು ಹೆಮ್ಮೆಯಿಂದ ಮತದಾರರ ಬಳಿಗೆ ಹೋಗಬಹುದು. ಬಡವರ ಸರ್ಕಾರವಾಗಿರುವ ಕಾಂಗ್ರೆಸ್ ಕೈ ಬಲಪಡಿಸಲು ಲಕ್ಷ್ಮಣ್ ಅವರನ್ನು ಬಹುಮತದಿಂದ ಗೆಲ್ಲಿಸಬೇಕು. ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಬಿಜೆಪಿ ಬೇರನ್ನೇ ಕಿತ್ತು ಎಸೆಯಬೇಕು ಎಂದು ಹೇಳಿದರು.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಮನೆ ಮನೆಗೆ ತೆರಳಿ ಲಕ್ಷ್ಮಣ್ ಅವರನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ. ವಿಧಾನಸಭೆ ಚುನಾವಣೆಯಲ್ಲಿ ಕೊಡಗಿನಲ್ಲಿ ಮಾಡಿದಂತಹ ಬದಲಾವಣೆ ಲೋಕಸಭಾ ಚುನಾವಣೆಯಲ್ಲೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಮಾತನಾಡಿ ಬಹಳ ಕಾಲದಿಂದ ನಾವೇ ಇಲ್ಲಿ ಗೂಟ ಹೊಡೆದುಕೊಂಡು ಕುಳಿತಿದ್ದೇವೆ ಎಂದುಕೊಂಡಿದ್ದವರಿಗೆ ಮಂತರ್ ಗೌಡ ಮತ್ತು ಪೊನ್ನಣ್ಣ ಆಯ್ಕೆ ಸರಿಯಾಗಿ ಬುದ್ಧಿ ಕಲಿಸಿದೆ. ಇಬ್ಬರು ಪೈಪೋಟಿ ಮೇಲೆ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 3 ಜಿಲ್ಲೆಗೆ ಸೀಮಿತವಾಗಿರುವ ಪಕ್ಷದ ಜತೆ ದೇಶದ ದೊಡ್ಡ ಪಕ್ಷ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂದರೆ ಕರ್ನಾಟಕದಲ್ಲಿ ಬಿಜೆಪಿ ಎಷ್ಟು ದುರ್ಬಲ ಆಗಿದೆ ಎನ್ನುವುದು ಗೊತ್ತಾಗುತ್ತದೆ. ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲಿಸುವುದಕ್ಕೋಸ್ಕರ ಮೈಸೂರು ಮಹಾರಾಜರನ್ನು ಹಿಡಿದರು. ಜೆಡಿಎಸ್‌ನವರದ್ದು ಅನುಕೂಲ ರಾಜಕಾರಣ. ಅವರ ಲಾಭಕ್ಕೋಸ್ಕರ ಏನು ಬೇಕಾದರೂ ಮಾಡುತ್ತಾರೆ ಎಂದರು.
ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್.ಸಿ. ಮಹದೇವಪ್ಪ ಮಾತನಾಡಿ ನೋಟು ಅಮಾನಿಕರಣ ಮೂಲಕ ದೇಶದ ಅರ್ಥವ್ಯವಸ್ಥೆಯ ಬೆನ್ನೆಲುಬನ್ನೇ ಮುರಿಯಲಾಯಿತು. ಈ ಮೂಲಕ ಜನಸಾಮಾನ್ಯರ ಬದುಕಿನ ಭರವಸೆಯನ್ನೇ ಕಸಿದುಕೊಳ್ಳಲಾಯಿತು. ಇದು ಭಾರತದ ಭವಿಷ್ಯ ಮತ್ತು ಪ್ರಜಾಪ್ರಭುತ್ವ ಅಸ್ತಿತ್ವ ನಿರ್ಧರಿಸಲಿರುವ ಚುನಾವಣೆ ಇದು ಎಂದು ಹೇಳಿದರು.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮಣ್ ಮಾತನಾಡಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಜಾತಿ ಆಧಾರದಲ್ಲಿ ಯಾವತ್ತೂ ಗುರುತಿಸಿಕೊಂಡಿಲ್ಲ. ಒಕ್ಕಲಿಗನಾಗಿ ಹುಟ್ಟಿದರೂ ವಿಶ್ವಮಾನವನಾಗಿ ಬೆಳೆದಿದ್ದೇನೆ. ನನ್ನ ಮನೆ ದೇವರು ಬೈರವೇಶ್ವರ. ಬಿಜೆಪಿ ಮನೆದೇವರು ಸುಳ್ಳು. ಆದರೆ ಸತ್ಯದ ಕವಚ ಹಾಕಿಕೊಂಡು ಸುತ್ತಾಡುತ್ತಿದೆ. ಇದನ್ನು ಬಯಲು ಮಾಡುವ ಸಮಯ ಬಂದಿದೆ. ವಿಶ್ವಮಟ್ಟದಲ್ಲಿ ಬೆಂಗಳೂರು ಗುರುತಿಸುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಭಾವನಾತ್ಮಕ ವಿಷಯ ಇಟ್ಟುಕೊಂಡು ಜನರ ದಾರಿ ತಪ್ಪಿಸುವುದು ಬಿಜೆಪಿ ಕೆಲಸ. ಬಿಜೆಪಿ ಅರಮನೆಯಲ್ಲಿ ಇರುವ ವ್ಯಕ್ತಿಗೆ ಟಿಕೆಟ್ ಕೊಟ್ಟರೆ, ಕಾಂಗ್ರೆಸ್ ಸಣ್ಣ ಮನೆಯಲ್ಲಿ ಇರುವ ವ್ಯಕ್ತಿಗೆ ಟಿಕೆಟ್ ಕೊಟ್ಟಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮಹಿಳಾ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಕೆಪಿಸಿಸಿ ಸದಸ್ಯರಾದ ಕೆ.ಪಿ ಚಂದ್ರಕಲಾ, ಮಂಜುನಾಥ್ ಗುಂಡೂರಾವ್, ಶ್ಯಾಂ, ಕೆಪಿಸಿಸಿ ಸಂಯೋಜಕ ನಟೇಶ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್‌ಮುತ್ತಪ್ಪ ಮತ್ತಿತರರು ಇದ್ದರು.