ಸಚಿವರಿಗೆ ಈ ವಾರದಿಂದಲೇ ಲೋಕಸಭಾ ಚುನಾವಣೆ ಅಗ್ನಿಪರೀಕ್ಷೆ

Congress
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಲೋಕಸಭೆ ಚುನಾವಣೆ ಅಗ್ನಿಪರೀಕ್ಷೆಗೆ ಒಡ್ಡಿಕೊಂಡಿರುವ ಸಿದ್ದರಾಮಯ್ಯ ಸಂಪುಟದ 28 ಸಚಿವರಿಗೆ ಅಗ್ನಿಪರೀಕ್ಷೆ ಆರಂಭವಾಗಿದೆ. ಸಚಿವರು ತಮಗೆ ಜವಾಬ್ದಾರಿ ನೀಡಿದ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಬೇಕೆಂದು ಚುನಾವಣೆ ಸಮಿತಿಗೆ ಹೆಸರುಗಳನ್ನು ಶಿಫಾರಸು ಮಾಡಿದ್ದು, ಶಿಫಾರಸು ಮಾಡಲ್ಪಟ್ಟವರ ‘ಸಾಮರ್ಥ್ಯ’ ಎಷ್ಟೆಂದು ಅಳೆಯುವ ಕೆಲಸ ನಾಳೆ- ನಾಡಿದ್ದಿಂದಲೇ ಆರಂಭವಾಗುತ್ತಿದೆ.

ಎಐಸಿಸಿಯು ಕ್ಷೇತ್ರವಾರು ಜವಾಬ್ದಾರಿ ವಹಿಸಿ ನಾಲ್ಕೈದು ಬಾರಿ ಸೂಚನೆ ಕೊಟ್ಟ ಮೇಲೆ ಸಚಿವರು ಅಭಿಪ್ರಾಯ ಸಂಗ್ರಹಿಸಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಕಳುಹಿಸಿದ್ದ ಪ್ರತಿನಿಧಿಗಳ ಕೈಗೆ ಇಟ್ಟಿದ್ದಾರೆ. ಪಟ್ಟಿಯಲ್ಲಿರುವ ಹೆಸರು ಮುಂದಿಟ್ಟುಕೊಂಡು ಖಾಸಗಿ ಸಂಸ್ಥೆ ಆಯಾ ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹಿಸಲಿದೆ. ಸಂಭಾವ್ಯ ಎದುರಾಳಿಗೆ ಪಕ್ಷದಿಂದ ಶಿಫಾರಸು ಆಗಿರುವವರು ಎಷ್ಟು ಸಮರ್ಥರು ಎಂದು ಅಳೆಯುವ ಕೆಲಸ ವಾರದಲ್ಲಿ ನಡೆಯಲಿದೆ.

ಈ ಸರ್ವೆ ಸಮರ್ಥ ಅಭ್ಯರ್ಥಿಯ ಹುಡುಕಾಟದ ಜತೆಗೆ ಸಚಿವರ ಬಣ್ಣವನ್ನೂ ಬಯಲು ಮಾಡಲಿದೆ. ಒಂದು ವೇಳೆ ಸಮರ್ಥರು ಸಿಗದೇ ಹೋದಲ್ಲಿ, ಅಭ್ಯರ್ಥಿ ಆರಿಸುವಲ್ಲಿ ತಾವೆಷ್ಟು ಸಮರ್ಥರು ಎಂದು ಹೈಕಮಾಂಡ್ ಗಮನಕ್ಕೆ ಹೋಗಲಿದೆ. ಖಾಸಗಿ ಸಂಸ್ಥೆಯು ನೀಡಿದ ವರದಿಯಲ್ಲಿ ಸೂಕ್ತರು ಸಿಗಲಿಲ್ಲ ಎಂದಾದರೆ ಸಚಿವರೇ ಕಣಕ್ಕಿಳಿಯಬೇಕಾಗುತ್ತದೆ, ಅಥವಾ ಅವರು ಯಾರನ್ನು ಕಣಕ್ಕಿಳಿಸಿದರೆ ಗೆಲ್ಲಿಸಿಕೊಂಡು ಬರುತ್ತೇವೆಂದು ಸ್ಕ್ರೀನಿಂಗ್ ಕಮಿಟಿಗೆ ವಾಗ್ದಾನ ಮಾಡಬೇಕಾಗುತ್ತದೆ.

ಮುಂದೇನು?: ಸಚಿವರು ನೀಡಿರುವ ಅಭ್ಯರ್ಥಿಗಳ ಪಟ್ಟಿ ಜತೆಗೆ ಬೇರೆ ಹೆಸರು ಸೂಚಿಸಲು ಪಕ್ಷ ಅವಕಾಶ ಕೊಟ್ಟಿದೆ. ಹೀಗಾಗಿ ಕಳೆದ ಎರಡು ದಿನಗಳಲ್ಲಿ ಒಂದಷ್ಟು ಹೆಸರು ಹೆಚ್ಚುವರಿಯಾಗಿ ಸೇರ್ಪಡೆಯಾಗಿವೆ ಎಂದು ಹೇಳಲಾಗುತ್ತಿದೆ. ಜನವರಿ 22-23ರ ನಂತರ ಸರ್ವೆ ತಂಡ ಕ್ಷೇತ್ರದಲ್ಲಿ ಓಡಾಡಿ, ಪಕ್ಷದ ಕಾರ್ಯಕರ್ತರ ನಡುವೆ ಅಭಿಪ್ರಾಯ ಹೆಕ್ಕಲಿದೆ. ಯಾರು ಅಭ್ಯರ್ಥಿಯಾದರೆ ಜನಬೆಂಬಲ ಗಳಿಸಬಹುದು ಎಂದು ವರದಿ ಸಿದ್ಧಪಡಿಸಲಿದೆ. ಇದಕ್ಕಾಗಿ ತಂಡಗಳು ಸಜ್ಜಾಗಿದೆ.

ಫೆಬ್ರವರಿ ಮೊದಲ ವಾರ ಎಐಸಿಸಿ ರಚಿಸಿರುವ ಸ್ಕ್ರೀನಿಂಗ್ ಸಮಿತಿ ಮುಂದೆ ವರದಿ ಮಂಡನೆಯಾಗಲಿದೆ. ವರದಿಯ ಅನುಸಾರ ಸ್ಪಷ್ಟತೆ ಸಿಕ್ಕಿರುವ ಕ್ಷೇತ್ರ ಹೊರತುಪಡಿಸಿ ಉಳಿದ ಕಡೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸ್ಕ್ರೀನಿಂಗ್ ಸಮಿತಿ ಕ್ಷೇತ್ರವಾರು ಶಾಸಕರು, ಜಿಲ್ಲಾ ಹಾಗೂ ತಾಲೂಕು ಘಟಕದ ಪ್ರಮುಖರನ್ನು ಆಹ್ವಾನಿಸಿ ಅಭಿಪ್ರಾಯ ಕೇಳಲಿದೆ. ಅಂತಿಮವಾಗಿ ಅದೇ ವಾರ 28 ಕ್ಷೇತ್ರಗಳಿಗೂ ಒಂದು ಅಥವಾ ಎರಡು ಹೆಸರನ್ನು ಅಂತಿಮಗೊಳಿಸಿ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳಿಸಲಿದೆ.

ಎರಡು ಸರ್ವೆ: ಈಗಾಗಲೆ ಜನಾಭಿಪ್ರಾಯ ಸಂಗ್ರಹಿಸಿರುವ ಕಾಂಗ್ರೆಸ್​ಗೆ ಶೇ.50ಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುವ ಮಾಹಿತಿ ಸಿಕ್ಕಿದೆ ಎಂದು ತಿಳಿಸಿರುವ ಕಾಂಗ್ರೆಸ್ ನಾಯಕರು, ಮುಂದೆ ಅಭ್ಯರ್ಥಿ ಆಯ್ಕೆ ಹಾಗೂ ಪಕ್ಷದ ಪರವಾದ ವಾತಾವರಣ ತಿಳಿಯುವ ಪ್ರಯತ್ನವಾಗಿ ಸರ್ವೆ ನಡೆಸಲಾಗುತ್ತದೆ. ಹಲವು ಸಚಿವರಿಗೆ ಚುನಾವಣಾ ಜವಾಬ್ದಾರಿ ಇಷ್ಟವಿಲ್ಲದೆ, ಪಕ್ಷ ನೀಡಿದ ಕೆಲಸ ಮಾಡುತ್ತಿದ್ದೇವೆ ಎಂಬ ಮನಸ್ಥಿತಿಯಲ್ಲಿ ಚಟುವಟಿಕೆ ನಡೆಸಿದ್ದಾರೆ. ಇನ್ನೊಂದೆಡೆ ಸಚಿವ ಸ್ಥಾನ ಪಡೆದುಕೊಂಡ ಮೇಲೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ಎಂಬ ಸ್ಪಷ್ಟ ತಾಕೀತು ಹೈಕಮಾಂಡ್ ಕಡೆಯಿಂದ ಇದೆ.

ನಿಗಮ, ಮಂಡಳಿ ಗೊಂದಲ ಕೊನೇ ಹಂತಕ್ಕೆ

ಬೆಂಗಳೂರು: ಕಾಂಗ್ರೆಸ್ ರಾಜ್ಯ ನಾಯಕರಿಗೆ ತಲೆನೋವಾಗಿರುವ ನಿಗಮ, ಮಂಡಳಿ ನೇಮಕ ಪ್ರಕ್ರಿಯೆಯನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂಬ ಹೈಕಮಾಂಡ್ ಸೂಚನೆ ಅನುಸಾರ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಶನಿವಾರ ತಡರಾತ್ರಿ ಸಭೆ ನಡೆಸಿದ್ದಾರೆ.

ಭಾನುವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆಗೂ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಿದ್ದಾರೆಂಬ ಮಾಹಿತಿ ಇದೆ. ಶಾಸಕರು ಹಾಗೂ ಕಾರ್ಯಕರ್ತರಿಗೆ ನಿಗಮ, ಮಂಡಳಿ ಹಂಚಿಕೆ ಮಾಡುವ ವಿಷಯದಲ್ಲಿ ಹತ್ತಾರು ಸಭೆಗಳು ನಡೆದಿದ್ದು, ಹೈಕಮಾಂಡ್ ಹಂತಕ್ಕೆ ದೂರು ಸಲ್ಲಿಕೆಯಾಗಿತ್ತು. ಕೊನೆಗೆ ಇರುವ ಅವಕಾಶದಲ್ಲಿ ಬೇಡಿಕೆ ಈಡೇರಿಸುವುದು ಕಷ್ಟವಾಗಲಿದೆ ಎಂದರಿತು ಗ್ಯಾರಂಟಿ ಯೋಜನೆ ಅನುಷ್ಠಾನ ಮೇಲ್ವಿಚಾರಣೆಗೆ ಸಮಿತಿ ರಚಿಸಿ, ಅಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಗ್ಯಾರಂಟಿ ಸಮಿತಿಯಲ್ಲಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ, ಜಿಲ್ಲೆಗೊಬ್ಬರಂತೆ 31 ಉಪಾಧ್ಯಕ್ಷರಿಗೆ ಅವಕಾಶ ನೀಡಿ ರಾಜ್ಯ ಸಚಿವ ಸಂಪುಟ ಸ್ಥಾನ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಒಂದಷ್ಟು ಒತ್ತಡ ಕಡಿಮೆ ಮಾಡಿಕೊಳ್ಳುವ ಲೆಕ್ಕಾಚಾರ. ಇದೀಗ ಶಾಸಕರಿಗೆ ಅವಕಾಶ ನೀಡುವ ಒಂದು ಪಟ್ಟಿ, ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆದುಕೊಳ್ಳುವಲ್ಲಿ ವಿಫಲರಾದವರು ಹಾಗೂ ಪ್ರಮುಖ ಕಾರ್ಯಕರ್ತರಿಗೆ ಅವಕಾಶ ನೀಡುವ ಎರಡನೇ ಪಟ್ಟಿ, ಅವಕಾಶ ಪಡೆದುಕೊಳ್ಳಲು ಅರ್ಹರಾದ ಚುನಾವಣೆಯಲ್ಲಿ ದುಡಿದವರಿಗೆ ರಾಜ್ಯ, ಜಿಲ್ಲೆ ಮಟ್ಟದಲ್ಲಿ ಗ್ಯಾರಂಟಿ ಮೇಲುಸ್ತುವಾರಿ ಸಮಿತಿಯಲ್ಲಿ ಅವಕಾಶ ನೀಡುವ ಮೂರನೇ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net