ಲಿಂಗಾಯತರಿಗೆ ಕಾಂಗ್ರೆಸ್ ಏನು ಮಾಡಿದೆ ?

TENGINAKAI NEWWWW
Published on

ಹುಬ್ಬಳ್ಳಿ : ಕೆಲವರು ತಮ್ಮ ಹಿತಾಸಕ್ತಿಗಾಗಿ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಲಿಂಗಾಯತರಿಗೆ ಎಂದಿಗೂ ಅನ್ಯಾಯ ಮಾಡಿಲ್ಲ. ಆದರೆ, ಕಾಂಗ್ರೆಸ್ ಏನು ಮಾಡಿದೆ ? ಎಂದು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಪಕ್ಷ ಬಿಡುವಾಗ ಸಮಾಜದವರನ್ನು ಕೇಳಿದ್ದಾರೆಯೇ ? ಎಂದರು.

ಕೆಲವರು ತಮಗೆ ಅನ್ಯಾಯ ಆದ ತಕ್ಷಣ ಇಡೀ ಸಮಾಜಕ್ಕೆ ಅನ್ಯಾಯವಾಗಿದೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಯಾರೋ ಒಬ್ಬರು ಪಕ್ಷದ ವಿರುದ್ಧ ಮಾತನಾಡಿದರೆ ಪಕ್ಷದಲ್ಲಿ ಭಿನ್ನಮತ ಇದೆ ಎನ್ನಲಾಗುವುದಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಅವರಿಗೆ ಪಕ್ಷದಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅವರೊಂದಿಗೆ ರ್ಚಚಿಸಿ ಬಗೆಹರಿಸುತ್ತೇವೆ. ಪಕ್ಷ ಎಲ್ಲವನ್ನೂ ಗಮನಿಸುತ್ತಿರುತ್ತದೆ. ಲೋಪ ಇದ್ದಲ್ಲಿ ಸರಿಪಡಿಸುತ್ತೇವೆ ಎಂದು ತಿಳಿಸಿದರು.

ನಾನು ಯಾರಿಗೂ ಬಕೆಟ್ ಹಿಡಿಯುವುದಿಲ್ಲ. ಅಂತಹ ಪರಿಸ್ಥಿತಿ ಇದುವರೆಗೆ ಬಂದಿಲ್ಲ. ಪಕ್ಷ ಸಂಘಟನೆ ಮೂಲಕ ಬೆಳೆದಿದ್ದೇನೆ. ನಾನು ಬಕೆಟ್ ಹಿಡಿದಿರುವುದು ಬಿಜೆಪಿಗೆ ಮಾತ್ರ. ವ್ಯಕ್ತಿ ಪೂಜೆ ಮಾಡುವುದಿಲ್ಲ, ಪಕ್ಷ ಪೂಜೆ ಮಾಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net