

ಮಸ್ಕಿ: ಕಾಂಗ್ರೆಸ್‌ನಿಂದ ಎರಡು ಸಲ ಗೆಲುವು ಸಾಧಿಸಿ ಅಧಿಕಾರದ ಆಸೆಗಾಗಿ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿ ಸೇರಿರುವ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಹೇಳಿದರು.
ಪಟ್ಟಣದ ಬಸವೇಶ್ವರ ನಗರ ಬಳಿಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಇನ್ನು ಕೆಲ ತಿಂಗಳಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಪಕ್ಷದ ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜಾಗಬೇಕು. ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ. ಉಪ ಚುನಾವಣೆಯ ಸಮರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಕಾರ್ಯಕರ್ತರು ಬೇರು ಮಟ್ಟದದಿಂದ ಪಕ್ಷ ಸಂಘಟನೆ ಮಾಡಬೇಕು ಎಂದರು.
ಶ್ರೀದೇವಿ ನಾಯಕ ಮಾತನಾಡಿ, ಉಪ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿ ಆಖಾಡಕ್ಕಿಳಿಯಲಿದ್ದಾರೆ. ಮಸ್ಕಿ ಕ್ಷೇತ್ರ ಮತ್ತೊಮ್ಮೆ ಕೈ ವಶ ವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎಚ್ ಬಿ. ಮುರಾರಿ, ನರಸಿಂಹ ನಾಯಕ, ಸಮೀರ್ ರಾಯಚೂರು, ರವೀಂದ್ರ, ರಮೇಶ ಯಾದವ, ಬಸನಗೌಡ ಮುದಬಾಳ, ನಿರುಪಾದೆಪ್ಪ ವಕೀಲರು, ತಿಮ್ಮಯ್ಯ ನಾಯಕ, ಹನುಮಂತಪ್ಪ ಮುದ್ದಾಪುರ, ಶ್ರೀ ಶೈಲಪ್ಪ ಬ್ಯಾಳಿ, ಆದೇಶ ನಾಯಕ, ನಾಗೇಂದ್ರಪ್ಪ ಮಟಮಾರಿ, ಶಶಿಕಲಾ ಇದ್ದರು.