

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಸ್ವಪಕ್ಷೀಯ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದಿರುವ ಹಿನ್ನೆಲೆಯಲ್ಲಿ ನಾಮ ನಿರ್ದೇಶನ ಸಮಿತಿಗಳಿಗೆ ನೇಮಕಾತಿಗಾಗಿ ಕಾಂಗ್ರೆಸ್‌ನ ಸ್ಥಳೀಯ ಆಕಾಂಕ್ಷಿಗಳು, ನಾಯಕರ ಮೇಲೆ ಒತ್ತಡ ಹೇರುವಲ್ಲಿ ನಿರತರಾಗಿದ್ದು ರಾಜಧಾನಿಯಲ್ಲಿ ಮೊದಲ ಹಂತದ ಮಾತುಕತೆಗಳು ಬಿರುಸಾಗಿವೆ.
ಪ್ರಸ್ತುತ ಗ್ಯಾರೆಂಟಿ ಘೋಷಣೆಗಳ ಅನುಷ್ಠಾನ, ಅನುದಾನ ಹೊಂದಾಣಿಕೆ ಮತ್ತು ಲೋಕಸಭಾ ಚುನಾವಣೆಗೆ ಸಿದ್ಧತೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ತಲೆ ಕೆಡಿಸಿಕೊಳ್ಳುತ್ತಿದೆ. ಇದರ ನಡುವೆ ಪಕ್ಷ ಸಂಘಟನೆಯ ನೆಪದಲ್ಲಿ ಸೂಕ್ತ ಗಾದಿಗಾಗಿ ನಿರಂತರವಾಗಿ ಮನವಿ ಸಲ್ಲಿಸುವ ಕಸರತ್ತು ನಡೆಯುತ್ತಿದೆ. ಇನ್ನು ಜಿಲ್ಲೆಗೊಂದರಂತೆ ಒಬ್ಬರಿಗೆ ನಿಗಮ ಮಂಡಳಿ ನೀಡುವ ಸಾಧ್ಯತೆ ಇದೆ ಎಂಬ ಮಾತು ಆಕಾಂಕ್ಷಿಗಳು ಹೆಚ್ಚಿನ ಒತ್ತಡ ಹೇರಲು ಪ್ರಮುಖ ಕಾರಣವಾಗಿದೆ.
ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಸೇರಿದಂತೆ ಹಲವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ಕೇಶವರೆಡ್ಡಿ ಶಿಫಾರಸ್ಸಿನ ಪತ್ರವು ವರಿಷ್ಠರ ಬಳಿ ಸೇರಿದ್ದು ಸಚಿವ ಡಾ ಎಂ.ಸಿ.ಸುಧಾಕರ್, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅಯ್ಯರ್ ಮೂಲಕ ಕೆಪಿಸಿಸಿ ಮೇಲೆ ಒತ್ತಡ ಹಾಕಿಸಲಾಗುತ್ತಿದೆ. ಇತ್ತೀಚೆಗೆ ಪಕ್ಷದ ಸ್ಥಳೀಯ ಪದಾಧಿಕಾರಿಗಳು ಮತ್ತು ಬಣಗಳು ಬಹಿರಂಗವಾಗಿ ಮನವಿ ಪತ್ರವನ್ನು ಸಲ್ಲಿಸಿವೆ.
*ಚಾತಕ ಪಕ್ಷಿಗಳಂತೆ ನಿರೀಕ್ಷೆ
ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ವಿವಿಧ ನಾಮ ನಿರ್ದೇಶನ ಸಮಿತಿಗಳಿಗೆ ನೇಮಕವಾಗುವ ನಿಟ್ಟಿನಲ್ಲಿ ಸ್ವಪಕ್ಷೀಯ ನಾಯಕರು ಮತ್ತು ಪದಾಧಿಕಾರಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಪ್ರತಿಸ್ಪರ್ಧಿಗಳು ಅಧಿಕಾರವನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಸಚಿವರು, ಶಾಸಕರೊಂದಿಗೆ ತಿರುಗಾಡಿಕೊಂಡು, ಪಕ್ಷದ ಸಂಘಟನೆಯ ಪ್ರತಿಫಲವಾಗಿ ಹುದ್ದೆಯನ್ನು ಕೊಡಿಸಲು ಕೇಳಲಾಗುತ್ತಿದೆ. ಮತ್ತೊಂದೆಡೆ ಸಾಮೂಹಿಕವಾಗಿ ಚುನಾವಣೆಯಲ್ಲಿ ಕೆಲಸ ಮಾಡಿರುವ ಬೆಂಬಲಿತರ ಪೈಕಿ ಯಾರಿಗೆ ಅವಕಾಶ ಕೊಡಿಸುವುದು? ಯಾರಿಗೆ ಬಿಡುವುದು? ಎನ್ನುವ ತಲೆ ನೋವು ಶಾಸಕರನ್ನು ಕಾಡುತ್ತಿದೆ. ಒಬ್ಬರಿಗೆ ಕೊಟ್ಟು ಮತ್ತೊಬ್ಬರಿಗೆ ಕೈ ತಪ್ಪಿಸಿದಾಗ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಎಲ್ಲರ ಮನವಿಗೂ ಸಹ ನಗುಮೊಗದಲ್ಲಿಯೇ ಒಪ್ಪಿಗೆ ಸೂಚಿಸಿದಂತೆ ವರ್ತಿಸಲಾಗುತ್ತಿದೆ.
* ನಾಮ ನಿರ್ದೇಶನಗಳ ಅವಕಾಶ
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗೆ ನಾಮ ನಿರ್ದೇಶಿತ ಸದಸ್ಯರು, ನಗರಾಭಿವೃದ್ಧಿ ಪ್ರಾಧಿಕಾರ, ಭೂ ನ್ಯಾಯ ಮಂಡಳಿ, ಭೂ ಮಂಜೂರಾತಿ ಸಮಿತಿ, ಆಸ್ಪತ್ರೆಗೆ ಸಂದರ್ಶಕರ ಸಮಿತಿ, ಪಶುಭಾಗ್ಯ ಸಮಿತಿ ಸೇರಿ ನಾನಾ ಸಮಿತಿಗಳಿಗೆ ನೇಮಕವಾಗಬೇಕಾಗಿದೆ. ತಲಾ ಒಂದು ಕ್ಷೇತ್ರಕ್ಕೆ 50 ಕ್ಕೂ ಹೆಚ್ಚು ಮಂದಿಗೆ ಅಧಿಕಾರವನ್ನು ಕೊಡಬಹುದು. ಇದರ ನಡುವೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಸಚಿವ ಡಾ ಎಂ.ಸಿ.ಸುಧಾಕರ್, ಶಾಸಕರಾದ ಪ್ರದೀಪ್ ಈಶ್ವರ್, ಎಸ್.ಎನ್.ಸುಬ್ಬಾರೆಡ್ಡಿ ಶಿಫಾರಸನ್ನು ಪ್ರಮುಖವಾಗಿ ಪರಿಗಣಿಸಿ, ನೇಮಕಾತಿ ಆದೇಶ ಹೊರಡಿಸಲಾಗುತ್ತದೆ. ಎಲ್ಲರನ್ನೂ ತೃಪ್ತಿಪಡಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಚಿಂತನೆ ಹೊಂದಿದ್ದಾರೆ.
.