ಬೆಲೆ ಏರಿಕೆ ವಿರೋಧದ ಕಾಂಗ್ರೆಸ್ ಸಭೆಯಲ್ಲಿ ಗಲಾಟೆ, ಬೇಸರಿಸಿಕೊಂಡ ನಾಯಕರು

IMG-20250415-WA0032.jpg
Published on

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಬೆಲೆ ಏರಿಸಿರುವುದನ್ನು ವಿರೋಧಿಸಿ ಕೈಗೊಳ್ಳಲು ಉದ್ದೇಶಿಸಿರುವ ಕಾಂಗ್ರೆಸ್ ಹೋರಾಟದ ಪೂರ್ವ ಸಿದ್ಧತಾ ಸಭೆಯಲ್ಲಿ  ನಿಂದನೆ, ಆರೋಪ ಪ್ರತ್ಯಾರೋಪಗಳ ರಂಪಾಟ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ಕೆಪಿಸಿಸಿ ಉಪಾಧ್ಯಕ್ಷ ಕೃಷ್ಣಂರಾಜು, ಪ್ರಧಾನ ಕಾರ್ಯದರ್ಶಿ ಉದಯಶಂಕರ್ ನೇತೃತ್ವದಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಸ್ವಪಕ್ಷೀಯ ಮುಖಂಡರ ಕಡೆಗಣನೆ, ಪಕ್ಷ ಸಂಟನೆಗೆ ಒತ್ತು ನೀಡದಿರುವುದು, ನಿರಂತರವಾಗಿ ಒಂದೊಂದೆ ಸ್ಥಳಿಯ ಆಡಳಿತ ಸಂಸ್ಥೆಗಳ ಹಿಡಿತ ತಪ್ಪಿ ಹೋಗುತ್ತಿರುವ ವಿಚಾರಗಳನ್ನು ಮುಂದಿಟ್ಟುಕೊಂಡು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಆಂಜಿನಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲಾಗುತ್ತಿದೆ. ಆದರೆ, ಇಲ್ಲಿನ ಶಾಸಕ ಪ್ರದಿಪ್ ಈಶ್ವರ್ ರ್ನಿಲಕ್ಷ್ಯ ಧೋರಣೆಯಿಂದ ಹಾಳು ಮಾಡುತ್ತಿದ್ದು ಹೇಳುವುದನ್ನು ಕೇಳುವಂತಿಲ್ಲ, ಕೇಳಿ ಮಾಡುವಂತಿಲ್ಲ ಎನ್ನುವಂತಾಗಿದೆ. ಈಗಲೇ ಪಕ್ಷವು ಕ್ಷೇತ್ರದಲ್ಲಿ ಸೊರಗಿದೆ. ಇದರ ಬಗ್ಗೆ ವ್ಯಾಪಕವಾಗಿ ಅಸಮಾಧಾನ ವ್ಯಕ್ತವಾಗುತ್ತಿದ್ದರೂ ವರಿಷ್ಠರು ಕಿವಿಗೊಡದಿದ್ದಲ್ಲಿ ಮತ್ತಷ್ಟು ನಷ್ಟ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊನೆಗೆ ಏ.17 ರಂದು ಕೈಗೊಂಡಿರುವ ಹೋರಾಟವನ್ನು ಯಶಸ್ವಿಗೊಳಿಸೋಣ, ಬಳಿಕ ಅಸಮಾಧಾನಿತರ ಸಭೆಯಲ್ಲಿ ಸಮಸ್ಯೆಗಳನ್ನು ಚರ್ಚಿಸಿ, ಬಗೆಹರಿಸಿಕೊಳ್ಳೋಣ ಎಂದು ಕೃಷ್ಣಂರಾಜು ಸಲಹೆ ನೀಡಿ, ಸಮಾಧಾನಪಡಿಸಿದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಕೋಚಿಮುಲ್ ಮಾಜಿ ನಿರ್ದೇಶಕ ಭರಣಿ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ನಾಗಭೂಷಣ್, ನಗರಸಭಾ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್ ಮತ್ತಿತರರು ಇದ್ದರು. 

*ಅಧ್ಯಕ್ಷಗಿರಿ ಪಕ್ಷದವರಿಗಿಲ್ಲ
ಮಂಡಿಕಲ್ಲು ಮತ್ತು ಮಂಚೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹೊರಗಿನವರಿಗೆ ನೀಡಲಾಗಿದೆ. ಪಕ್ಷ ಸಂಟನೆಯಲ್ಲಿ ಭಾಗಿಯಾದವರನ್ನು ಬಿಟ್ಟು ಜತೆಯಲ್ಲಿ ತಿರುಗಾಡುವವರಿಗೆ ಶಾಸಕರು ಕೊಡಿಸಿದ್ದಾರೆ. ಇದರಿಂದ ಪಕ್ಷಕ್ಕೆ ಏನು ಲಾಭವಿದೆ?. ಏನು ನಿರೀೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ಮುಖಂಡರ ಪ್ರಶ್ನೆಗಳಿಗೆ ಪಕ್ಷದ ಉಸ್ತುವಾರಿಗಳು ತಬ್ಬಿಬ್ಬಾದರು.
ಶಾಸಕರು ಸಂಪರ್ಕಕ್ಕೆ ಸಿಗುವುದಿಲ್ಲ. ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಮರ್ಪಕವಾಗಿ ಸ್ಪಂದಿಸುವುದಿಲ್ಲ. ಯಾರನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮೊದಲಿನಿಂದಲೂ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಸ್ವೀಕರಿಸುವುದಿಲ್ಲ ಎಂಬ ಆರೋಪಗಳು ಕೇಳಿ ಬಂದವು.

*ವಾಗ್ವಾದಕ್ಕೆ ತಟಸ್ಥ
ಶಾಸಕರ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿದ್ದರೂ ಸಭೆಯಲ್ಲಿ ಸಮರ್ಥಿಸಿಕೊಳ್ಳುವ ಕೆಲಸವಾಗಿಲ್ಲ. ಪ್ರದೀಪ್ ಈಶ್ವರ್ ನಿಷ್ಠಾವಂತ ಬೆಂಬಲಿಗರು ಸಹ ತಟಸ್ಥರಾಗಿಯೇ ಕುಳಿತುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net