ಕಾಂಗ್ರೆಸ್ ಮುಖಂಡರಿಂದ ಗೃಹ ಸಚಿವರಿಗೆ ತರಾಟೆ

parameshwar
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಎರಡು ಹತ್ಯೆ, ಬಂದ್ ಮತ್ತಿತರ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಲು ಮಂಗಳೂರಿಗೆ ಶನಿವಾರ ಬಂದಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಮುಸ್ಲಿಂ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರ್ಕೀಟ್ ಹೌಸ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಡಾ.ಪರಮೇಶ್ವರ್ ಪಕ್ಷದ ಕಾರ್ಯಕರ್ತರ ಅಹವಾಲು ಆಲಿಸುತ್ತಿದ್ದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಶಾಹುಲ್ ಹಮೀದ್, ಕೆ.ಅಶ್ರಫ್, ಸುಹೈಲ್ ಕಂದಕ್ ಮೊದಲಾದವರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ. ಪೊಲೀಸ್ ಇಲಾಖೆ ಸಂಘ ಪರಿವಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಮುಸ್ಲಿಮರ ಕೊಲೆ,ಕೊಲೆ ಯತ್ನ ಪ್ರಕರಣ ಹೆಚ್ಚುತ್ತಿದೆ. ನೀವು ಬೆಂಗಳೂರಿನಲ್ಲಿ ಕುಳಿತುಕೊಂಡು ದಿನಕ್ಕೊಂದು ಹೇಳಿಕೆ ನೀಡುತ್ತೀರಿ ಎಂದು ಗೃಹ ಸಚಿವರ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಶುಕ್ರವಾರ ಮೂರು ಮಂದಿ ಮುಸ್ಲಿಂ ಸಮುದಾಯದ ಅಮಾಯಕ ಯುವಕರ ಮೇಲೆ ಚೂರಿ ಇರಿತವಾಗಿದೆ. ಅವರಿಗೆ ಸರ್ಕಾರದಿಂದ ಪರಿಹಾರ ನೀಡಬೇಕು. ಜಿಲ್ಲೆಯ ಕೋಮು ಪ್ರಚೋದಿಸುವ ನಾಯಕರಿಗೆ ಮಾತಿಗೆ ಕಡಿವಾಣ ಹಾಕಬೇಕು. ಪ್ರಚೋದಕಕಾರಿ ಹೇಳಿಕೆಯಿಂದಲೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಗೃಹಸಚಿವರಿಗೆ ಮನವರಿಕೆ ಮಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯದ ಜೀವನಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಮುಖಂಡರು ಒತ್ತಾಯಿಸಿದರು. ಗೃಹಸಚಿವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net