ಕಾಂಗ್ರೆಸ್ ನಾಯಕರು ಓತಿಕ್ಯಾತ ಇದ್ದಂತೆ

1 vikram 1
Published on

ಧಾರವಾಡ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮಾಡಿದ್ದನ್ನೇ ಆ ಪಕ್ಷದ ಉಳಿದ ನಾಯಕರು ಮಾಡುತ್ತಾರೆ. ಕಾಂಗ್ರೆಸ್ ನಾಯಕರು ಕರ್ನಾಟಕದಲ್ಲಿದ್ದಾಗ ಒಂದು ರೀತಿ, ಗೋವಾದಲ್ಲಿ ಒಂದು ರೀತಿ ರೂಪ ತಾಳುತ್ತಾರೆ. ಇವರು ಒಂದು ರೀತಿಯಲ್ಲಿ ಬಣ್ಣ ಬದಲಿಸುವ ಓತಿಕ್ಯಾತ ಇದ್ದಂತೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಗೋವಾ ಚುನಾವಣೆ ಸಂದರ್ಭದಲ್ಲಿ ಮಹದಾಯಿ ವಿಚಾರವಾಗಿ ಮಾತನಾಡಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕರ್ನಾಟಕಕ್ಕೆ ಒಂದು ಹನಿ ನೀರನ್ನೂ ನೀಡುವುದಿಲ್ಲ ಎಂದಿದ್ದರು. ಇದೀಗ ಆ ಪಕ್ಷದ ರಾಜ್ಯ ಮುಖಂಡರು ತಮ್ಮ ನಾಯಕಿ ಮಾತಿನಂತೆ ನಡೆಯುವ ಮೂಲಕ ರಾಜ್ಯಕ್ಕೆ ದ್ರೋಹ ಮಾಡುವ ಹೇಳಿಕೆ ನೀಡಿದ್ದಾರೆ. ಈ ಕುರಿತು ಹೆಚ್ಚು ಹೇಳುವುದರಲ್ಲಿ ಅರ್ಥವಿಲ್ಲ ಎಂದರು.

ಬಿಜೆಪಿಗೂ ಸರ್ದಾರ್ ವಲ್ಲಭಭಾಯಿ ಪಟೇಲ್​ಗೂ ಏನು ಸಂಬಂಧ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರು ಪ್ರಶ್ನಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಜೋಶಿ, ತಾವಿರುವುದು ನಕಲಿ ಕಾಂಗ್ರೆಸ್ ಎಂಬುದು ಸಿದ್ದರಾಮಯ್ಯಗೆ ಗೊತ್ತಿಲ್ಲ. ಅಸಲಿ ಕಾಂಗ್ರೆಸ್​ನಲ್ಲಿದ್ದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿ ದೇಶಕ್ಕೆ ಕೊಡುಗೆ ನೀಡಿದವರನ್ನು ಬಿಜೆಪಿ ಗೌರವಿಸುತ್ತಿದೆ. ಇಂದಿನ ಕಾಂಗ್ರೆಸ್​ಗೂ ಅಂದಿನ ಕಾಂಗ್ರೆಸ್​ಗೂ ಸಂಬಂಧವಿಲ್ಲ. ಅಂದಿನ ಕಾಂಗ್ರೆಸ್ ವಿಸರ್ಜನೆ ಆಗಬೇಕು ಎಂದು ಅಂದೇ ಗಾಂಧೀಜಿ ಹೇಳಿದ್ದರು ಎಂದು ಟಾಂಗ್ ನೀಡಿದರು.

ಇಂದಿರಾಗಾಂಧಿ, ನೆಹರು, ರಾಜೀವಗಾಂಧಿ, ಸಂಜಯ ಗಾಂಧಿ ಬಿಟ್ಟರೆ ಉಳಿದವರು ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರನ್ನೂ ಎತ್ತಿಲ್ಲ. ದೆಹಲಿಯಲ್ಲಿನ ಅನೇಕ ಕ್ರೀಡಾ ಸಮುಚ್ಚಯ ಹಾಗೂ ಮಹತ್ವದ ಸ್ಥಳಗಳಿಗೆ ನೆಹರು, ಗಾಂಧಿ ಹೆಸರು ಇಡಲಾಗಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ಪಟೇಲ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಪ್ರಾರಂಭಿಸುವ ಪೂರ್ವದಲ್ಲಿ ಕಾಂಗ್ರೆಸ್ ನಾಯಕರು ಪಟೇಲ್ ಅವರನ್ನು ಎಷ್ಟು ಬಾರಿ ನೆನಪು ಮಾಡಿಕೊಂಡಿದ್ದಾರೆ ಎಂದು ಪ್ರಶ್ನಿಸಿದ ಜೋಶಿ, ಪಟೇಲ್ ಅವರ ಪುಣ್ಯತಿಥಿ ಹಾಗೂ ಜನ್ಮ ದಿನ ಆಚರಿಸಲಾಗದ ನಾಲಾಯಕ್ ಕಾಂಗ್ರೆಸ್ ನಾಯಕರಿಗೆ ಪಟೇಲ್ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಹೆಸರು ಬೆಳೆಯನ್ನು ಬೆಂಬಲ ಬೆಲೆ ಅಡಿ ಖರೀದಿಸಲು ಪ್ರಾರಂಭಿಸಿ ಉತ್ತಮ ಬೆಲೆ ನೀಡಲಾಗಿದೆ. ಯುಪಿಎ ಕಾಲದಲ್ಲಿ (2014ರಲ್ಲಿ) 4500 ರೂ. ಇತ್ತು. ಈಗ 7196 ರೂ. ಮಾಡಲಾಗಿದೆ. ಬೆಂಬಲ ಬೆಲೆ ನಿಗದಿ ಮಾಡುವುದು ಖರೀದಿ ಮಾಡುವುದಕ್ಕೆ ಅಷ್ಟೇ ಅಲ್ಲ. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗಲು ಈ ಉಪಕ್ರಮ. ಕಳೆದ 5 ವರ್ಷದಲ್ಲಿ ಶೇ. 70ರಷ್ಟು ಬೆಂಬಲ ಬೆಲೆ ಹೆಚ್ಚಿಸಿದ್ದು ರೈತರಲ್ಲಿ ಸಂತಸ ಮೂಡಿಸಿದೆ ಎಂದರು.

ಆದರ್ಶ ಗ್ರಾಮವಾದ ಕಬ್ಬೇನೂರ-ಹಾರೋಬೆಳವಡಿ ಗ್ರಾಮಗಳಲ್ಲಿ ಕೆಲ ತಾಂತ್ರಿಕ ಕಾರ್ಯಗಳಿಂದ ಕೆಲ ಕಾರ್ಯಗಳು ಮಾತ್ರ ಬಾಕಿ ಉಳಿದಿವೆ. ಕರೊನಾ ಕಾರಣದಿಂದ ಸಿಎಸ್​ಆರ್ ಅನುದಾನ ಬರಲು ವಿಳಂಬವಾಗಿದೆ. ಹೀಗಾಗಿ ಕೆಲ ದಿನಗಳಲ್ಲೇ ಅದನ್ನು ಸರಿಪಡಿಸಿ ಕಾಮಗಾರಿ ಪೂರ್ಣ ಮಾಡಲಾಗುವುದು ಎಂದರು.

ಮಾಜಿ ಸಚಿವ ವಿನಯ ಕುಲಕರ್ಣಿ ಬಿಜೆಪಿ ಸೇರ್ಪಡೆ ಕುರಿತು ನಮ್ಮೊಂದಿಗೆ ಯಾರೂ ಚರ್ಚೆ ನಡೆಸಿಲ್ಲ. ಅವರು ಬರುವ ವಿಚಾರ ನನಗಂತೂ ಗೊತ್ತಿಲ್ಲ. ಈ ವಿಚಾರವಾಗಿ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಘಟಕದ ಎದುರು ಯಾವುದೇ ಪ್ರಸ್ತಾವ ಇಲ್ಲ. ಹೀಗಾಗಿ ಇದೊಂದು ಚರ್ಚೆಗೆ ಯೋಗ್ಯವಾದ ವಿಷಯವಲ್ಲ.| ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net