

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಮುಕ್ಕಾಟೀರ ಶಿವು ಮಾದಪ್ಪ ಹಾಗೂ ಕುಶಾಲನಗರ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಬಿ.ಎಸ್. ಅನಂತಕುಮಾರ್ ಅವರನ್ನು ಪದಚ್ಯುತಗೊಳಿಸಿರುವುದು ಕಾಂಗ್ರೆಸ್ ವರಿಷ್ಠರ ಅಂಗಳಕ್ಕೆ ತಲುಪಿದೆ. ಜಿಲ್ಲೆಯ ಮುಖಂಡರ ಅಸಮಾಧಾನ ಪರಿಹರಿಸಲು ವರಿಷ್ಠರು ಯಾವ ಸೂತ್ರ ಅನುಸರಿಸುತ್ತಾರೆಂಬ ಕುತೂಹಲ ಮೂಡಿದೆ.
ಎರಡೂವರೆ ವರ್ಷದ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿರುವುದಕ್ಕೆ ಶಿವು ಮಾದಪ್ಪ ಇದೀಗ ಆಕ್ರೋಶಿತರಾಗಿ, ಪಕ್ಷ ತೊರೆಯು ತ್ತಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು. ವಿರಾಜಪೇಟೆ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಲ್ಲಿ ಮಾತ್ರ ಕಾಂಗ್ರೆಸ್ಸಿನಲ್ಲಿ ಮುಂದುವರಿಯುವ ಷರತ್ತು ವಿಧಿಸಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅತೃಪ್ತ ಶಿವು ಮಾದಪ್ಪ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಕರ್ನಾಟಕ ಪ್ರದೇಶ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ವಿಧಾನಸಭೆ ಪ್ರತಿಪಕ್ಷ ನಾಯಕ ಎಸ್. ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಒಬಿಸಿ ಘಟಕ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಿಸಿದ್ದಾರೆ.
ಎರಡೂವರೆ ವರ್ಷದಿಂದ ಪಕ್ಷದಲ್ಲಿ ಸ್ಥಾನಮಾನ ನೀಡದಿರುವ ಬಗ್ಗೆ ಶಿವು ತಮ್ಮ ಅಳಲು ತೋಡಿಕೊಂಡರು. ಈ ಸಂದರ್ಭದಲ್ಲಿ ಸಮಾಧಾನ ಪಡಿಸಿದ ವರಿಷ್ಠ ಮುಖಂಡರು, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬೆಳೆಯಲು ಅವಕಾಶ ಮಾಡಿಕೊಡುವ ಸ್ಪಷ್ಟ ಭರವಸೆ ನೀಡಿದ್ದಾರೆ. ಕೆಪಿಸಿಸಿ ಹುದ್ದೆ ನೀಡಲು ಎಐಸಿಸಿಗೆ ಶಿಫಾರಸ್ಸು ಮಾಡಿದ್ದೇನೆ. ನನ್ನನ್ನು ವೈಯುಕ್ತಿಕವಾಗಿ ಭೇಟಿ ಮಾಡುವಂತೆ ಶಿವು ಮಾದಪ್ಪಗೆ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದರು.
ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿದ ನಿಯೋಗದಲ್ಲಿ ವಿರಾಜಪೇಟೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಲ್ವಿನ್, ಶ್ರೀಮಂಗಲ ಗ್ರಾಪಂ ಸದಸ್ಯ ಮಾಣೀರ ಸುಧಿ ಇದ್ದರು.
ಎಂ. ಲಕ್ಷ್ಮಣ್ ಎದುರು ಆಕ್ರೋಶ
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಬಿ.ಎಸ್. ಅನಂತಕುಮಾರ್ ಅವರನ್ನು ಪದಚ್ಯುತಗೊಳಿಸಿರುವುದಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಲಕ್ಷ್ಮಣ್ ಎದುರು ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ್ ಜೋಡೋ ಸಭೆಗೆ ಆಗಮಿಸಿದ್ದ ಮುಖಂಡರು ತಮ್ಮ ಅತೃಪ್ತಿ ವ್ಯಕ್ತ ಪಡಿಸಿದರು.
ಅನಂತಕುಮಾರ್ ಅವರೊಂದಿಗೆ ಚರ್ಚಿಸದೆ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿರುವುದು ಸರಿಯಲ್ಲ. ೨ ವರ್ಷ ೯ ತಿಂಗಳು ಪಕ್ಷ ಸಂಘಟನೆಗೆ ಶ್ರಮಿಸಿರುವ ಮುಖಂಡನಿಗೆ ಅವಮಾನ ಮಾಡಿರುವುದು ಸರಿಯಲ್ಲ. ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಿ.ಪಿ. ಶಶಿಧರ್ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ನೇಮಕ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದರು.
ಕೊಡವ, ಗೌಡ, ಮುಸ್ಲಿಂ ಮುಖಂಡರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲಾಗಿದೆ. ವೀರಶೈವ- ಲಿಂಗಾಯಿತರಿಗೆ ಇದ್ದ ಒಂದು ಸ್ಥಾನವನ್ನು ಕಿತ್ತುಕೊಳ್ಳ ಲಾಗಿದೆ. ಈ ಹಿನ್ನೆಲೆಯಲ್ಲಿ ಖಾಲಿರುವ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್. ಅನಂತಕುಮಾರ್ ಅವರನ್ನು ನೇಮಕ ಮಾಡಬೇಕೆಂದು ಪಟ್ಟುಹಿಡಿದರು.
ತಮ್ಮ ಭಾವನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಮನಕ್ಕೆ ತರುವುದಾಗಿ ಎಂ. ಲಕ್ಷ್ಮಣ್ ಭರವಸೆ ನೀಡಿದರು. ಅನಂತಕುಮಾರ್ ಪರವಾಗಿ ಬಿ.ಎ. ಜೀವಿಜಯ, ಕೆ.ಎಂ. ಲೋಕೇಶ್, ಗುಡ್ಡೆಹೊಸೂರು ಚಂದ್ರಶೇಖರ್, ಗೀತಾ ಧರ್ಮಪ್ಪ, ಗೌತಮ್ ಶಿವಪ್ಪ, ಆಶ್ರಫ್ ಕುಶಾಲನಗರ, ಟಿ.ಇ. ಸುರೇಶ್, ಜೆ.ಎಲ್. ಜನಾರ್ಧನ್, ಹೆಬ್ಬಾಲೆ ಮಂಜುನಾಥ್ ಮತ್ತಿತರರು ಮಾತನಾಡಿದರು.
**
ಬೆಂಗಳೂರಿನಲ್ಲಿ ಕಾಂಗ್ರೆಸ್ ವರಿಷ್ಠ ನಾಯಕರನ್ನು ಭೇಟಿ ಮಾಡಿದ್ದು, ಶಿವು ಮಾದಪ್ಪ ಮನಸ್ಸಿಗೆ ಸಮಾಧಾನ ಆಗುವ ಭರವಸೆ ಸಿಕ್ಕಿದೆ. ರಾಜಕೀಯವಾಗಿ ಬೆಳೆಯುವ ಅವಕಾಶ ಮಾಡಿಕೊಡುವ ಭರವಸೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವು ಮಾದಪ್ಪ ಸಮಾಧಾನಗೊಂಡಿ ದ್ದಾರೆ. ಶಾಂತೆಯಂಡ ವೀಣಾ ಅಚ್ಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ.