

ಬೆಂಗಳೂರು: ಶಿರಾದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರಗೆ ಟಿಕೆಟ್ ನೀಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮಾಡಿದ್ದ ಶಿಫಾರಸಿಗೆ ಪಕ್ಷದ ರಾಜ್ಯದ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೆವಾಲಾ ಆಕ್ಷೇಪಿಸಿದ್ದರು. ಅಲ್ಲದೆ, ಕೊನೆಯ ಕ್ಷಣದಲ್ಲಿ ಹೆಸರು ಬದಲಿಸಲು ಮುಂದಾಗಿದ್ದರು ಎಂಬ ವಿಚಾರ ಬಯಲಾಗಿದೆ.
ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡೆಸಿದ ಪಿಸುಮಾತಿನ ಚರ್ಚೆಯ ವಿಡಿಯೋ ವೈರಲ್ ಆಗಿದೆ. ಅದರಲ್ಲಿ ಸುರ್ಜೆವಾಲಾ ಅಭಿಪ್ರಾಯ ಏನಾಗಿತ್ತು ಎಂಬುದನ್ನು ಡಿಕೆಶಿ ವಿವರಿಸಿದ್ದಾರೆ.
ಸಿದ್ದರಾಮಯ್ಯ ಸ್ಪಷ್ಟನೆ: ಹೈಕಮಾಂಡ್ನವರು ಬೇರೆ ಯಾರೂ ಹೊಸ ಅಭ್ಯರ್ಥಿಗಳು ಇಲ್ಲವೇ ಎಂದು ಕೇಳಿದ್ದರು. ‘ಇಲ್ಲ, ಜಯಚಂದ್ರ ಹಿರಿಯ ನಾಯಕರು. 1978ರಿಂದ ಶಾಸಕರಾಗಿದ್ದವರು. ಅವರಿಗೇ ಕೊಡಬೇಕು’ ಎಂಬ ಅಭಿಪ್ರಾಯ ನೀಡಿದ್ದೆವು. ರಾಜೇಶ್ ಗೌಡ ನಮ್ಮ ಪಕ್ಷದವನಲ್ಲ. ಆತ ಟಿಕೆಟ್ ಕೇಳಿದಾಗ, ಜಯಚಂದ್ರ ಇದ್ದಾರೆ ಕೊಡಲು ಬರಲ್ಲ ಎಂದಿದ್ದೆ. ಅದು ಬಿಟ್ಟು ಬೇರೆ ಏನಿಲ್ಲ. ತುಮಕೂರಿನ ಎಲ್ಲ ನಾಯಕರು ಒಟ್ಟಾಗಿದ್ದಾರೆ. ಯಾವುದೇ ಅಸಮಾಧಾನವಿಲ್ಲ ಎಂದು ಹೇಳಿದ್ದಾರೆ.
ಚರ್ಚೆಯ ಸಾರಾಂಶ
ಡಿ.ಕೆ. ಶಿವಕುಮಾರ್: ಸಾಹೇಬ್ರು ಕಾಲ್ ಮಾಡಿದ್ರು. ‘ಜಯಚಂದ್ರಗೆ ಕೊಡಬಾರದಿತ್ತು. ರಾಜೇಶ್ ಗೌಡಗೆ ಕೊಡಬೇಕಿತ್ತು. 1979ರಿಂದ ಅವ್ರಿಗೇ ಟಿಕೆಟ್ ಕೊಡ್ತಿದ್ದೀರಿ. 9 ಬಾರಿ ನಿಂತಿದ್ದಾರೆ. ಮತ್ತೆ ಅವರ ಹೆಸರನ್ನೇ ಕಳಿಸಿದಿರಲ್ವಾ? ನಿಮಗೇನು ಕಾಮನ್ ಸೆನ್ಸ್ ಇಲ್ವಾ’ ಅಂತ ಕೇಳಿದ್ರು.
ಸಿದ್ದರಾಮಯ್ಯ: ಯಾರು ಹೇಳಿದ್ದು?
ಡಿಕೆಶಿ: ಅವ್ರೇ ರಣದೀಪ್ಸಿಂಗ್ ಸುರ್ಜೆವಾಲಾ. ‘ಮತ್ತೆ ಅವರ ಹೆಸರನ್ನೇ ರೆಫರ್ ಮಾಡಿದ್ಯಲ್ಲ’ ಅಂದ್ರು. ‘ನಾವೆಲ್ಲ ಕೂತು ಮಾತಾಡಿದ್ವಿ. ಅವರನ್ನು ಬಿಟ್ಟು ಮಾಡಕ್ಕೆ ಆಗಲ್ಲ’ ಅಂತ ಹೇಳಿದೆ...
ಸಿದ್ದರಾಮಯ್ಯ: ಓಹೋ...
ಡಿಕೆಶಿ: ‘ಈಗ ಯೋಚನೆ ಮಾಡಿ ನೋಡಿ’ ಅಂದ್ರು.
ಸಿದ್ದರಾಮಯ್ಯ: ಅವ್ನು (ರಾಜೇಶ್ ಗೌಡ) ಬಿಜೆಪಿ ಸೇರಾಯ್ತಲ್ಲ?
ಡಿಕೆಶಿ: ನಾನೂ ಅದನ್ನೇ ಹೇಳ್ದೆ. ನಮಗೆ ಕ್ಯಾಂಡಿಡೇಟ್ ಇಲ್ಲ ಅಂದೆ. ಲಾಸ್ಟ್ ಟೈಮ್ ದಳಕ್ಕೆ ಮಾಡಿದ್ದ ಅವ್ನು ಅಂತ ಹೇಳಿದೆ.
ಸಿದ್ದರಾಮಯ್ಯ: ಅವ್ನು ದಳದಲ್ಲೂ ಟಿಕೆಟ್ ಕೇಳಿದ್ದ, ಬಿಜೆಪಿಯಲ್ಲೂ ಕೇಳಿದ್ದ. ನಾಮ್ ಕೆ ವಾಸ್ತೆ ನಮ್ಮಲ್ಲಿದ್ದ.
ಡಿಕೆಶಿ: ಹೇಳಿದೆ, ನಾನು ಹೇಳಿದೆ. ಈಗ ಫ್ಯಾಕ್ಸ್ ನೋಡಿ, ತಿರುಗಾ ಯೋಚನೆ ಮಾಡಿ ಹೇಳು ಅಂತಿದಾರೆ (ಸುರ್ಜೆವಾಲಾ). ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಅಷ್ಟೇ.