

ಉಡುಪಿ: ನೈರುತ್ಯ ಶಿಕ್ಷಕರ ಕ್ಷೇತ್ರ ಮತದಾರರ ಪಟ್ಟಿಗೆ ಈಗಾಗಲೇ 18 ಸಾವಿರ ಶಿಕ್ಷಕರು ನೋಂದಣಿ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಕರು ನೋಂದಣಿಯಾಗಲಿದ್ದು, 20 ಸಾವಿರಕ್ಕೆ ಏರಿಯಾಗುವ ಸಂಭವವಿದೆ. ಈ ಬಾರಿ ಚುನಾವಣಾ ಆಯೋಗದ ನಿರ್ದೆಶನದಂತೆ ಜಿಲ್ಲಾಡಳಿತವೇ ಮತದಾರರನ್ನು ನೋಂದಾಯಿಸಿಕೊಳ್ಳುತ್ತಿರುವುದು ಶ್ಲಾನೀಯ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ, ಅನುದಾನಿತ, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ 3 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು ಮತದಾರರಾಗಲು ಆರ್ಹರಾಗಿದ್ದಾರೆ. ಬೇರೆ ಯಾವ ಸರ್ಕಾರಿ ನೌಕಕರಿಗೂ ಚುನಾವಣೆಗೆ ನಿಲ್ಲುವ ಅವಕಾಶವಿಲ್ಲ. ಶಿಕ್ಷಕರಿಗೆ ಮಾತ್ರ ಈ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಉಡುಪಿ, ದ.ಕ., ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ, ಚೆನ್ನಗಿರಿ ಸೇರಿ 30 ವಿಧಾನಸಭಾ ಕ್ಷೇತ್ರಗಳು ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಒಳಪಡುತ್ತವೆ ಎಂದು ಮಾಹಿತಿ ನೀಡಿದರು.
ಒಪಿಎಸ್ ಜಾರಿಗೆ ಬದ್ಧ
2006ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ಎನ್ ಪಿ ಎಸ್ ಜಾರಿಗೊಳಿಸಿತ್ತು. ಇದರಿಂದ ನಿವೃತ್ತಿಯ ಬಳಿಕ ಶಿಕ್ಷಕರಿಗೆ ಅಲ್ಪಮೊತ್ತದ ಪೆನ್ಶನ್ ಲಭಿಸುತ್ತಿದ್ದು, ಕಾಂಗ್ರೆಸ್ ಸರ್ಕಾರ ಒಪಿಎಸ್ (ಹಳೆ ಪಿಂಚಣಿ ಪದ್ಧತಿ) ಜಾರಿಗೆ ಬದ್ಧವಾಗಿದೆ. ಈ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲೂ ಘೋಷಣೆ ಮಾಡಿದ್ದೇವೆ. ಅನುದಾನಿತ ಶಾಲಾ ಶಿಕ್ಷಕರಿಗೆ ಯಾವುದೇ ಪಿಂಚಣಿ ಲಭ್ಯವಾಗುತ್ತಿಲ್ಲ. ಭಡ್ತಿ ಹೊಂದಿದ ಶಿಕ್ಷಕರಿಗೆ ಸಂಬಳ ಹೆಚ್ಚಳವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ, ಮುಖಂಡರಾದ ಕುಶಲ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ಬಿಪಿನ್ ಚಂದ್ರಪಾಲ್ ಮೊದಲಾದವರು ಉಪಸ್ಥಿತರಿದ್ದರು.