ಬನವಾಸೆ ರಂಗಸ್ವಾಮಿಗೆ ಯಾವ ನೈತಿಕತೆ ಇದೆ: ಕಾಂಗ್ರೆಸ್ ಮುಖಂಡ ಚಂದ್ರು ಪ್ರಶ್ನೆ

CHANDRU congress- press meet (6)
Published on

ಹಾಸನ: ಹಿರಿಯರಾದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರ ಬಗ್ಗೆ ಮಾತನಾಡಲು ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿಗೆ ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ಮುಖಂಡ ಚಂದ್ರು ಪ್ರಶ್ನೆ ಮಾಡಿ ಸಿಡಿಮಿಡಿಗೊಂಡರು.

ಹಾಸನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಯಾದಂತಹ ಬನವಾಸೆ ರಂಗಸ್ವಾಮಿಯವರು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ರಾಜಣ್ಣ ಅವರನ್ನು ತೆಗೆಯಬೇಕೆಂದು ಹೇಳಿಕೆ ನೀಡಿದ್ದಾರೆ. ಇದು ಇವರ ಮೂರ್ಖತನ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬರುತ್ತಿಲ್ಲ, ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆ ಕೇಳುತ್ತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯ ನಡೆಸುತ್ತಿಲ್ಲ ಎಂದು ಆಪಾದನೆ ಮಾಡಿರುತ್ತಾರೆ. ಬನವಾಸೆ ರಂಗಸ್ವಾಮಿ ವಿಧಾನಸಭಾ ಚುನಾವಣೆಯಲ್ಲಿ 4,300 ಮತವನ್ನು ಪಡೆದು, ಠೇವಣಿಯನ್ನು ಸಹ ಪಡೆಯದೆ ಈಗ ಏಲ್ಲಿದ್ದಾರೆ? ಮತ್ತು ಹಾಸನ ವಿಧಾನಸಭಾ ಕ್ಷೇತ್ರದ ಯಾವ ಕಾರ್ಯಕರ್ತರ ಮತ್ತು ಗ್ರಾಮಾಂತರದಲ್ಲಿರುವ ಮತ್ತು ನಗರದ ಜನರ ಕುಂದು ಕೊರತೆಗಳನ್ನು ಕೇಳಿದ್ದಾರೆ. ಮತ್ತು ಇವರು ಎಷ್ಟು ಕಾರ್ಯಕರ್ತರ ಸಭೆಗಳನ್ನು ಮಾಡಿದ್ದಾರೆ. ಹಾಗೂ ಎಷ್ಟು ಕಾರ್ಯಕರ್ತರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಇವರು ಉಸ್ತುವಾರಿ ಸಚಿವರ ಬಳಿಯೂ ಹೋಗಿಲ್ಲ, ಕಾರ್ಯಕರ್ತರನ್ನು ಸಭೆಗೂ ಆಹ್ವಾನಿಸದೆ ಸುಮ್ಮನೆ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ 116 ಬೂತ್‌ಗಳಿಗೆ ಏಜೆಂಟ್ ಫಾರಂಗಳನ್ನು ನೀಡದ ವ್ಯಕ್ತಿ. ಒಂದು ಗ್ರಾಮ ಪಂಚಾಯಿತಿ ಮತ್ತು ಸೊಸೈಟಿ ಚುನಾವಣೆಗೆ ನಿಲ್ಲದ ವ್ಯಕ್ತಿ ಹಿರಿಯರಾದ ಉಸ್ತುವಾರಿ ಸಚಿವರಾದಂತಹ ರಾಜಣ್ಣ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಕೆ.ಎನ್.ರಾಜಣ್ಣನವರು ಯಾವುದೇ ಒಬ್ಬ ಜಿಲ್ಲೆಯ ಕಾರ್ಯಕರ್ತರು ಸಾಮಾನ್ಯ ಜನರಿರಬಹುದು, ಎಲ್ಲರಿಗೂ ಕೂಡ ಸೌಮ್ಯ ಸ್ವಭಾವದಿಂದ ಕೆಲಸ ಮಾಡುವ ವ್ಯಕ್ತಿ. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಎಲ್ಲಾ ಸಚಿವರನ್ನು ಜಿಲ್ಲೆಗೆ ಕರೆಯಿಸಿ ಉದ್ಘಾಟನೆ ಮಾಡಿಸಿ ರೈತರಿಗೆ ನೀರು ಬಿಡಿಸುವ ಕೆಲಸ ಮಾಡಿದ ವ್ಯಕ್ತಿ, ಹಾಸನ ನಗರಸಭೆಯನ್ನು ಮೇಲ್ದರ್ಜೆಗೇರಿಸಿ ಮಹಾನಗರ ಪಾಲಿಕೆಗೆ ಅನುಮೋದನೆಯನ್ನು ನೀಡಿಸಿದ ವ್ಯಕ್ತಿ, ಯಾವ ಒಬ್ಬ ಅಧಿಕಾರಿಗಳಿಗೂ ಹಣದ ನಿರೀಕ್ಷೆಯನ್ನು ಇಟ್ಟಿಲ್ಲದ ವ್ಯಕ್ತಿ ಮತ್ತು ಅಧಿಕಾರಿಗಳು ಸಾರ್ವಜನಿಕರು ಇಷ್ಟ ಪಡುವ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಸುಖಾಸುಮ್ಮನೆ ದೂರು ಹೇಳಲಾಗುತ್ತಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರೀಫ್, ರಾಘವೇಂದ್ರ, ಜಗದೀಶ್, ಅಸ್ಲಾಂ ಪಾಷಾ, ರಾಮೇಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net