'ಬಿಜೆಪಿ ಯೋಜನೆಗೆ ಕಾಂಗ್ರೆಸ್ ಶಂಕುಸ್ಥಾಪನೆ'

'Congress lays foundation stone for BJP plan'
Published on

ಮಡಿಕೇರಿ:

ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆಗೆ ಗುರುವಾರ (ಜ.೨೫) ಸಿ.ಎಂ. ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸುತ್ತಿದ್ದು, ಈ ಯೋಜನೆ ಸಂಸದ ಪ್ರತಾಪ್ ಸಿಂಹ ಕೊಡುಗೆ ಎಂದು ಬಿಜೆಪಿ ವಕ್ತಾರ ಮಹೇಶ್ ಜೈನಿ ಹೇಳಿದ್ದಾರೆ.

ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಪಟ್ಟಣಕ್ಕೆ ಕೇಂದ್ರ ಸರ್ಕಾರದ ಅಮೃತ್ ೨.೦ ಯೋಜನೆ ಅಡಿ ಕೇಂದ್ರ ಸರ್ಕಾರದ ಶೇ. ೫೦, ರಾಜ್ಯ ಸರ್ಕಾರದ ಶೇ.೪೦ ಹಾಗೂ ಸ್ಥಳೀಯ ಸಂಸ್ಥೆಗಳ ಶೇ.೧೦ ಅನುದಾನದಲ್ಲಿ ನೀರು ಸರಬರಾಜು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದರಂತೆ ಮಡಿಕೇರಿ ನಗರಕ್ಕೆ ೨ ವಿಭಾಗಗಳಲ್ಲಿ ಟ್ರಂಚ್ ೧ ರಲ್ಲಿ ೧೯.೯೦ ಕೋಟಿ ರೂ. ಮತ್ತು ಟ್ರಂಚ್ ೨ ರಲ್ಲಿ ೨೭. ೫೦ ಕೋಟಿ ರೂ. ಗಳ ಯೋಜನೆ ತಯಾರಿಸಲಾಗಿದ್ದು ಮಡಿಕೇರಿ ನಗರಕ್ಕೆ ಕುಂಡ ಮೇಸ್ತ್ರಿ ಮತ್ತು ಕೂಟು ಹೊಳೆಯಿಂದ, ವಿರಾಜಪೇಟೆಗೆ ಭೇತ್ರಿಯಿಂದ, ಸೋಮವಾರಪೇಟೆಗೆ ಹಾರಂಗಿಯಿಂದ ಹಾಗೂ ಕುಶಾಲನಗರಕ್ಕೆ ಕಾವೇರಿ ಹೊಳೆಯಿಂದ ನೀರು ಸರಬರಾಜು ವ್ಯವಸ್ಥೆ ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರದ ಅಮೃತ್ ೨.೦ ಯೋಜನೆ ಅಡಿ ಯೋಜನೆ ರೂಪಿಸಾಲಾಗಿದೆ. ಕೇಂದ್ರದ ನರೇಂದ್ರ ಮೋದಿ ಮತ್ತು ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಸಂಸದ ಪ್ರತಾಪ್ ಸಿಂಹ ವಿಶೇಷ ಆಸಕ್ತಿಯ ಪರಿಣಾಮವಾಗಿ ಈ ಯೋಜನೆಗೆ ರೂಪುರೇಷೆ ತಯಾರಾಗಿದ್ದು, ಇದು ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಇದೆ ರೀತಿಯಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net