

ನಂಜನಗೂಡು: ಯುವ ಕಾಂಗ್ರೆಸ್ ತಾಲೂಕು ಸಮಿತಿ ನಂಜನಗೂಡು ವತಯಿಂದ ಎಜುಕೇಷನ್ ಎಕ್ಸ್‌ಪೋ -2025 ಮತ್ತು ಯೂತ್ ಕಾಂಗ್ರೆಸ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಯುವ ಸಂಕಲ್ಪ ಕಾರ್ಯಕ್ರಮವನ್ನು ನಂಜನಗೂಡಿನ ನಂದಿ ಕನ್ವೆನ್ಷನ್‌ಹಾಲ್‌ನಲ್ಲಿ ಸೋಮವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ ಚಾಲನೆ ನೀಡಿದ ಬಳಿಕ ಚುನಾಯಿತ ಯೂತ್ ಕಾಂಗ್ರೆಸ್ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು. ಯೂತ್ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ಯುವ ಸಂಕಲ್ಪದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ನಂತರ ಮಾತನಾಡಿದ ದರ್ಶನ್ ಧ್ರುವನಾರಾಯಣ ಅವರು, ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಗಿದ್ದು, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಅದರದ್ದೇ ಆದ ಇತಿಹಾಸ ಇದೆ. ಸ್ವಾತಂತ್ರೃ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ಮಹತ್ವವಾಗಿದೆ. ಹಾಗಾಗಿ ಪಕ್ಷದ ಬಲವರ್ಧನೆಗೆ ಸಹಕರಿಸಿ ಕೆಲಸ ಮಾಡಬೇಕು. ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆ ಮಾಡಬೇಕಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ‘ಎಜುಕೇಷನ್ ಎಕ್ಸ್ ಪೋ’ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೋಮೋ ನಂತರ ಮುಂದೆ ಏನು ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಶ್ರೀಕಂಠ, ಉಪಾಧ್ಯಕ್ಷೆ ರಿಯಾನ ಬಾನು, ಜಿಪಂ ಮಾಜಿ ಸದಸ್ಯೆ ಲತಾಸಿದ್ದಶೆಟ್ಟಿ, ಯುತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಚಂದನ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಎಂ ಶಂಕರ್, ಕುರಹಟ್ಟಿ ಮಹೇಶ್, ಶ್ರಿಕಂಠ ನಾಯಕ, ಕೆ. ಮಾರುತಿ, ಬಗರ್ ಹುಕುಂ ಅಕ್ರಮ ಸಕ್ರಮ ಸಾಗುವಳಿ ಸಮಿತಿಯ ಸದಸ್ಯೆ ಜಯಮಾಲಾ ಬೀರೇಗೌಡ, ತಗಡೂರು ಗಾರ್ಡನ್ ಮಹೇಶ್, ರಾಹುಲ್, ಮುಳ್ಳೂರು ಮಹೇಂದ್ರ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.