ಕದಲೂರು ಉದಯ್ ಕಾಂಗ್ರೆಸ್ ಸೇರ್ಪಡೆ ಇಂದು: ಮದ್ದೂರು ಕ್ಷೇತ್ರದಲ್ಲಿ ಗರಿಗೆದರಿದ ರಾಜಕೀಯ

12M.D.R.4 K.M. UDAY
Published on

ಮದ್ದೂರು: ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೇವಕ ಕೆ.ಎಂ.ಉದಯ್ ಅವರು ಮಾ. 13ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.

ಮೂರು ವರ್ಷಗಳಿಂದ ತಾಲೂಕಿನಲ್ಲಿ ಮಿಂಚಿನ ಸಂಚಾರ ನಡೆಸಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಗಮನ ಸೆಳೆದಿದ್ದರು. ಕರೊನಾ ಸಂಕಷ್ಟದ ಸಂದರ್ಭದಲ್ಲಿ ತಾಲೂಕಿನ ಪ್ರತಿ ಮನೆಗೆ ಆರೋಗ್ಯ ಕಿಟ್, ಸಂಕಷ್ಟಲ್ಲಿರುವ ಜನರಿಗೆ ಆಹಾರ ಕಿಟ್, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ಸಹಾಯ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ತಾಲೂಕಿನ ಜನರಿಗೆ ಸಹಾಯ ಮಾಡಿದ್ದರು.

ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ರಾಜಕೀಯಕ್ಕೆ ಬರುವುದಾಗಿ ಹಾಗೂ ರಾಷ್ಟ್ರೀಯ ಪಕ್ಷವೊಂದರಿಂದ ಟಿಕೆಟ್ ತಂದು ಮದ್ದೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದರು. ನಂತರ ಮೈಸೂರು ಭಾಗದಲ್ಲಿ ಜೆಡಿಎಸ್ ಶಕ್ತಿ ಕುಂದಿಸಬೇಕು ಹಾಗೂ ಕಾಂಗ್ರೆಸ್‌ಗೆ ಶಕ್ತಿ ತುಂಬಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಹೇಳಿದ್ದರು.

ತಮ್ಮ ಅಭಿಮಾನಿಗಳು, ಹಿತೈಷಿಗಳು, ಯುವಕರು ಹಾಗೂ ಸಾರ್ವಜನಿಕರ ಅಭಿಪ್ರಾಯ ಪಡೆದು ಅಂತಿಮವಾಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಂತೆ ಆಗುತ್ತದೆ ಎಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net