

ಪಡುಬಿದ್ರಿ: ಬಿಜೆಪಿಗರು ಅಲ್ಪಮಾನವರು, ಅವರು ಯಾವತ್ತೂ ವಿಶ್ವಮಾನರಾಗಲು ಸಾಧ್ಯವಿಲ್ಲ. ಇನ್ನೊಂದು ಧರ್ಮದವರನ್ನು ದ್ವೇಷಿಸುತ್ತಾರೆ. ಕರಾವಳಿ ಜಿಲ್ಲೆ ಒಂದು ಕಾಲದಲ್ಲಿ ಸರ್ವ ಧರ್ಮ ಸಮನ್ವಯತೆಯ ಕೇಂದ್ರವಾಗಿತ್ತು. ಆಗ ಇಲ್ಲಿ ಶಿಕ್ಷಣ, ಆರೋಗ್ಯ, ಬ್ಯಾಂಕ್‌ಗಳು ಅಭಿವೃದ್ಧಿಯಾಗಲು ಸಾಧ್ಯವಾಯಿತು. ಇಲ್ಲಿ ಬಿಜೆಪಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಜಾತಿ ದ್ವೇಷದ ಅಲೆಯನ್ನು ಹುಟ್ಟಿ ಹಾಕಿದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಕಾಂಗ್ರೆಸ್ ಜನಧ್ವನಿ ಪಾದಯಾತ್ರೆಯ ಸಂದರ್ಭ ಪಡುಬಿದ್ರಿಯಲ್ಲಿ ಸೋಮವಾರ ಆಯೋಜಿಸಲಾದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜೆಪಿಯು ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕತ್ತಿ ಎಂಬ ಸಚಿವ ಬಡವರ ಬಿಪಿಎಲ್ ಕಿತ್ತುಕೊಳ್ಳುತ್ತಿದ್ದಾನೆ. ಬಡವರ ಸಾಲ ಮನ್ನಾ ಎಂದು ಸುಳ್ಳು ಭರವಸೆ ನೀಡಿ ಇದೀಗ ಸಾಲ ಮರುಪಾವತಿಗೆ ಒತ್ತಾಯಿಸುತ್ತಿದ್ದಾರೆ. ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಕ್ರೂಡ್ ಆಯಿಲ್ ಬೆಲೆ ಬ್ಯಾರಲ್‌ಗೆ 100ರಿಂದ 120 ಡಾಲರ್ ಇತ್ತು. ಆದರೆ ಪೆಟ್ರೋಲ್ ದರ ಲೀಟರ್‌ಗೆ 70 ದಾಟಿರಲಿಲ್ಲ. ಆದರೆ ಈಗ ಬ್ಯಾರಲ್ ದರ 50 ಇದ್ದರೂ ಪೆಟ್ರೋಲ್ ದರ 100ರ ಹತ್ತಿರವಿದೆ. ದಿನಬಳಕೆಯ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದೆ ಎಂದು ಟೀಕಿಸಿದರು.
ರಾಜ್ಯಸಭಾ ಸದಸ್ಯ ನಾಸಿರ್ ಹುಸೈನ್, ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಕೆ.ಅಭಯಚಂದ್ರ ಜೈನ್, ರಮಾನಾಥ ರೈ ಮತ್ತು ಯು.ಟಿ.ಖಾದರ್, ಮಾಜಿ ಶಾಸಕರಾದ ಗೋಪಾಲ ಪೂಜಾರಿ ಮತ್ತು ಮೊಯ್ದೀನ್ ಬಾವ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮೊದಲಾದವರು ಇದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು.
ಜನಧ್ವನಿ ಪಾದಯಾತ್ರೆಗೆ ಆಸ್ಕರ್ ಚಾಲನೆ
ಹೆಜಮಾಡಿಯಿಂದ ಆರಂಭವಾದ ಜನಧ್ವನಿ ಪಾದಯಾತ್ರೆಯನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ವರ್ಚುವಲ್ ಆಗಿ ಉದ್ಘಾಟಿಸಿ, ಕೇಂದ್ರದ ಜನವಿರೋಧಿ ನೀತಿಯನ್ನು ಜನ ಮನಗಂಡು ಜನರಿಗೆ ಸುಖಕರವಾದ ಸರ್ಕಾರ ಬರಲಿ ಎಂದು ಹಾರೈಸಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಶಾಸಕರಾದ ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ಗೋಪಾಲ ಪೂಜಾರಿ, ಎಂ.ಎ.ಗಫೂರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಉಪಸ್ಥಿತರಿದ್ದರು.
56 ಇಂಚಿನ ಎದೆಯುಳ್ಳವರಿಗೆ ದೇಶದ ರೈತರ, ಮಹಿಳೆಯರ ಬಗ್ಗೆ ಹೃದಯವೇ ಇಲ್ಲವಾಗಿದೆ. 3 ತಿಂಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅವರ ಸಮಸ್ಯೆ ಬಗೆಹರಿಸಿಲ್ಲವೇಕೆ? ಕರೆದು ಚರ್ಚೆ ಮಾಡದೆ ಹೋದರೆ ಪ್ರಜಾಪ್ರಭುತ್ವದಲ್ಲಿ ಉಳಿಯುವ ನೈತಿಕತೆ ಇದೆಯೇ? ಸಂಸತ್ತಿನಲ್ಲಿ ಚರ್ಚೆ ಇಲ್ಲದೆಯೇ ಕಾಯ್ದೆ ಜಾರಿ ಮಾಡಿದ್ದಾರೆ. ಪ್ರಮಾಣವಚನಕ್ಕೆ ಹಸಿರು ಶಾಲು ಹೊದ್ದುಕೊಂಡು ಬಂದ ಬಿಎಸ್‌ವೈ ಗೋಲಿಬಾರ್ ಮೂಲಕ ಇಬ್ಬರು ರೈತರನ್ನು ಕೊಂದುಹಾಕಿದ್ದರು. ಅವರಷ್ಟು ಲಂಚಕೋರ, ಭ್ರಷ್ಟ ಮತ್ತೊಬ್ಬರಿಲ್ಲ. ರಾಜ್ಯದಲ್ಲಿ 52 ಸಾವಿರ ಕೋಟಿ ರೂ. ಸಾಲವಿತ್ತು. ಈಗ 63 ಸಾವಿರ ಕೋಟಿ ರೂ.ಸಾಲವಾಗಿದೆ. ವರ್ಷದ ಕೊನೆಗೆ 90 ಸಾವಿರ ಕೋಟಿ ರೂ. ಸಾಲ ಮಾಡುತ್ತಾರೆ. ಅವರಿಗೆ ಆಡಳಿತ ನಡೆಸಲು ಆಗ್ತಾ ಇಲ್ಲ. ಜನರೇ ಇದಕ್ಕೆ ಸೂಕ್ತ ಉತ್ತರ ನೀಡಬೇಕು.
ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ