

ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಗೆ ತಕ್ಕ ಉತ್ತರ ನೀಡುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಶುಕ್ರವಾರ ಬೆಳಗ್ಗೆ 11ಕ್ಕೆ ಬೃಹತ್ ಜನಾಂದೋಲನ ಸಮಾವೇಶ ಹಮ್ಮಿಕೊಂಡಿದೆ.
ಸಮಾವೇಶ ಹಿನ್ನೆಲೆಯಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, 2 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಬೃಹತ್ ಜನಸ್ತೋಮದ ಎದುರು ಬಿಜೆಪಿ-ಜೆಡಿಎಸ್ ನಾಯಕರುಗಳ ಆರೋಪಗಳಿಗೆ ಉತ್ತರ ನೀಡಲು ಕಾಂಗ್ರೆಸ್ ನಾಯಕರು ತಯಾರಿ ನಡೆಸಿದ್ದಾರೆ. ಮುಡಾ ಹಗರಣದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಆ.7 ರಂದು ನಗರದಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಆದರೆ, ಜನರ ಎದುರು ಎಲ್ಲ ವಿಚಾರಗಳನ್ನು ತೆರೆದಿಡಬೇಕು ಎಂಬ ಉದ್ದೇಶದಿಂದ ಸುದ್ದಿ ಗೋಷ್ಠಿ ರದ್ದುಪಡಿಸಿದ್ದರು. ಹೀಗಾಗಿ ಬಿಜೆಪಿ-ಜೆಡಿಎಸ್ ನಾಯಕರುಗಳ ದೋಷಾರೋಪಣ ಪಟ್ಟಿಗೆ ಸಿದ್ದರಾಮಯ್ಯ ಆದಿಯಾಗಿ ಎಲ್ಲ ನಾಯಕರು ಸಮಾವೇಶದಲ್ಲಿ ಒಂದೊಂದಾಗಿ ಉತ್ತರ ನೀಡಲಿದ್ದಾರೆ.
ಸಮಾವೇಶದಲ್ಲಿ ಕಾಂಗ್ರೆಸ್‌ನ ರಾಷ್ಟ್ರ ಹಾಗೂ ರಾಜ್ಯ ಮುಖಂಡರುಗಳು ಭಾಗವಹಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಎಲ್ಲ ಸದಸ್ಯರು, ಕಾಂಗ್ರೆಸ್‌ನ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, 9 ಸಂಸದರು ಹಾಗೂ ಪಕ್ಷದ ಎಲ್ಲ ಮುಖಂಡರುಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆ ತರುವಂತೆ ಆಯಾ ಜಿಲ್ಲೆಯ ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ಜವಾಬ್ದಾರಿ ನೀಡಲಾಗಿದ್ದು, ಈಗಾಗಲೇ ಕಾಂಗ್ರೆಸ್ ಮುಖಂಡರು ಹಲವು ಸುತ್ತಿನ ಸಭೆ ನಡೆಸಿ ಜನರನ್ನು ಕರೆ ತರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಿಂದ 70 ಸಾವಿರ, ಚಾಮರಾಜನಗರ, ಕೊಡಗು ಹಾಗೂ ಮಂಡ್ಯ ಜಿಲ್ಲೆಯಿಂದ 30 ಸಾವಿರ, ಹಾಸನ, ರಾಮನಗರ ಜಿಲ್ಲೆಗಳಿಂದ 50 ಸಾವಿರ, ವಿವಿಧ ಸಂಘಟನೆಗಳು, ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಭಾಗದಿಂದ 50 ಸಾವಿರ ಜನರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ. ಮಳೆ ಬಂದರೂ ಸಮಾವೇಶಕ್ಕೆ ಯಾವುದೇ ರೀತಿಯ ಅಡ್ಡಿ ಆಗಬಾರದು ಎಂಬ ಉದ್ದೇಶದಿಂದ ಜರ್ಮನ್ ಟೆಂಟ್ ಮಾದರಿಯ ವೇದಿಕೆ ನಿರ್ಮಿಸಲಾಗಿದೆ. ಹಲವು ಕಡೆಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಎಲ್ಇಡಿ ಟಿವಿ ಅಳವಡಿಸಲಾಗಿದೆ.
ಬಿಗಿ ಪೊಲೀಸ್ ಬಂದೋಬಸ್ತ್: ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಸಮಾವೇಶ ಹಾಗೂ ಬಿಜೆಪಿ ಪಾದಯಾತ್ರೆ ಇರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ನಗರ ಪೊಲೀಸ್ ಆಯುಕ್ತ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ನಗರದ ಎಲ್ಲಡೆ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದು, ಸಮಾವೇಶ ನಡೆಯುವ ಮಹಾರಾಜ ಕಾಲೇಜು ಆವರಣದಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಸಮಾವೇಶಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸುವ ಹಿನ್ನೆಲೆಯಲ್ಲಿ ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ಮೈಸೂರಿಗೆ ಶುಕ್ರವಾರ ‘ಮೈಸೂರು ಚಲೋ’
ಮುಡಾ, ವಾಲ್ಮೀಕಿ ನಿಗಮ ಹಗರಣ ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಯು ಶುಕ್ರವಾರ ಸಂಜೆ ನಗರವನ್ನು ಪ್ರವೇಶಿಸಲಿದೆ. ಶುಕ್ರವಾರ ಬೆಳಗ್ಗೆ ಶ್ರೀರಂಗಪಟ್ಟಣದಿಂದ ಪಾದಯಾತ್ರೆಯಲ್ಲಿ ಹೊರಟು ಸಂಜೆ ಮುಡಾ ಆವರಣಕ್ಕೆ ಆಗಮಿಸಲು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಿರ್ಧರಿಸಿದ್ದಾರೆ. ಪಾದಯಾತ್ರೆ ಮುಕ್ತಾಯಗೊಂಡ ನಂತರ ‘ಮನೆ ಮಾದೇಗೌಡ’ ಖ್ಯಾತಿಯ ಮುಡಾ ಮಾಜಿ ಅಧ್ಯಕ್ಷ ಡಿ. ಮಾದೇಗೌಡ ಅವರ ಮನೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಡಿ.ಮಾದೇಗೌಡ ಅಧಿಕಾರಾವಧಿಯಲ್ಲಿ ನಗರದಲ್ಲಿ ಬಡಾವಣೆಗಳನ್ನು ನಿರ್ಮಿಸಿ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶಗಳನ್ನು ಹಂಚಿಕೆ ಮಾಡಿದ್ದರು. ‘ಮೈಸೂರು ಚಲೋ’ ಪಾದಯಾತ್ರೆಯು ಶುಕ್ರವಾರ ಸಂಜೆ ಮುಕ್ತಾಯಗೊಳ್ಳಲಿದ್ದು, ಶನಿವಾರ ಬೆಳಗ್ಗೆ 11ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಕಾಂಗ್ರೆಸ್ ನಿರ್ಮಿಸಿದ ವೇದಿಕೆಯನ್ನೇ ಮೈಸೂರು ಚಲೋ ಸಮಾವೇಶಕ್ಕೂ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಕಾಂಗ್ರೆಸ್‌ನ ಜನಾಂದೋಲನ ಸಮಾವೇಶದ ನಂತರ ಕಾಂಗ್ರೆಸ್ ನಾಯಕರುಗಳ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ಆ ಜಾಗದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳ ಫ್ಲೆಕ್ಸ್‌ಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ.