

ಆಲೂರು: ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನು ಮುಗಿಸಲು ಹಲವು ಯತ್ನಗಳನ್ನು ಮಾಡಿದೆ. ಇದರಿಂದಾಗಿ ನಾವು ನಮ್ಮ ನಿಲುವನ್ನು ಬದಲಿಸಿ, ಬಿಜೆಪಿ ಜತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡು ಮುಂದಿನ ಲೋಕಸಭಾ ಚುನಾವಣೆ ಎದುರಿಸಲಿದ್ದೇವೆ ಎಂದು ರಾಜ್ಯಸಭಾ ಸದಸ್ಯ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಹಾಗೂ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.
ಪಕ್ಷ ತೊರೆದು ಕಾಂಗ್ರೆಸ್ ಕೈ ಹಿಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ನೈತಿಕ ದೃಷ್ಟಿಯಿಂದಲಾದರೂ ಸಚಿವ ಸ್ಥಾನ ನೀಡಬೇಕಿತ್ತು. ನನ್ನ ರಾಜಕೀಯ ಅವಧಿಯಿಂದಲೂ ರೈತರ ಉದ್ದಾರಕ್ಕಾಗಿ ಶ್ರಮಿಸಿದ್ದು, ರೈತರ ಏಳಿಗೆ, ದಿನದಲಿತರ, ಮಹಿಳೆಯರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ನೂರಾರು ಕಾರ್ಯಕ್ರಮವನ್ನು ರೂಪಿಸಿದ್ದೇನೆ. ನನ್ನ ಜೀವನದಲ್ಲಿ ಸೋಲು, ಗೆಲುವನ್ನು ಅನುಭವಿಸಿದ್ದೇನೆ. ಲೋಕಸಭಾ ಕಲಾಪದಲ್ಲಿ ಕಡಿಮೆ ಗೆದ್ದ ಪಕ್ಷದ ಸಂಸದರಿಗೆ ಮಾತನಾಡಲು ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಅವಕಾಶವನ್ನು ನೀಡಿರಲಿಲ್ಲ ಎಂದು ಮನನೊಂದು ಹೇಳಿದರು.
ಪ್ರಜ್ವಲ್ ರೇವಣ್ಣ ಅವರು ಉತ್ತಮ ರಾಜಕೀಯ ಪಟುವಾಗಿದ್ದು, ಜಿಲ್ಲೆಯ ಸಮಗ್ರ ಹಾಗೂ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾದ ರಾಜಕೀಯ ಸಚಿವರನ್ನು ಭೇಟಿ ಮಾಡಿ ಜಿಲ್ಲೆಗೆ ಅವಶ್ಯಕತೆಯಿರುವ ಯೋಜನೆಯ ರೂಪುರೇಷೆಗಳನ್ನು ರೂಪಿಸಿದ್ದಾರೆ ಅವರನ್ನು ರಾಜಕೀಯವಾಗಿ ಬಲಿಷ್ಠರನ್ನಾಗಿ ಮಾಡಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಬಲ ಶಕ್ತಿ. ದೇಶದ 15 ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದರೆ, ಕಾಂಗ್ರೆಸ್ ಪಕ್ಷ 23 ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಿದ್ದು, 2 ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್, ಒಂದು ಅತಂತ್ರ ಎಂದು ಮಾಧ್ಯಮಗಳು ತಮ್ಮ ಆಸಕ್ತಿಗೆ ತಕ್ಕಂತೆ ವರದಿ ಮಾಡುತ್ತಿವೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಲೋಕಸಭಾ ಚುನಾವಣೆಯ ಮಾನದಂಡ ಅಲ್ಲ ಎಂದು ಅಭಿಪ್ರಾಯಪಟ್ಟರು.
ಶಾಸಕ ಎಚ್.ಡಿ ರೇವಣ್ಣ ಮಾತನಾಡಿ, ಕೊಬ್ಬರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಬೆಂಬಲ ನೀಡಲು ಪ್ರಜ್ವಲ್ ರೇವಣ್ಣ ಹಾಗೂ ದೇವೇಗೌಡರು ಶ್ರಮಿಸಿದ್ದಾರೆ. ನನ್ನ ಅಧಿಕಾರ ಅವಧಿಯಲ್ಲಿ ನೀರಾವರಿ ಸೌಲಭ್ಯ, ರಸ್ತೆ ಸೌಲಭ್ಯ, ಫ್ಲೈ ಓವರ್, ಆಲೂರು- ಬೇಲೂರು-ಚಿಕ್ಕಮಗಳೂರು ರೈಲ್ವೆ ಹಳಿಗಳ ನಿರ್ಮಾಣದ ಸರ್ವೇ ಮುಗಿದಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜನರ ಅನುಕೂಲದ ದೃಷ್ಟಿಯಿಂದ ಸಾವಿರಾರು ಕೋಟಿ ಅನುದಾನವನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಹಾಸನದಲ್ಲಿ ಐಐಟಿ ಹಾಗೂ ಏರ್‌ಪೋರ್ಟ್ ನಿರ್ಮಾಣ, ಹಾಗೂ ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸಿ ಜಿಲ್ಲೆಯ ಜನರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ಕನಸು ಹೊಂದಿದ್ದೇನೆ ಎಂದರು.
ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಪಂ ಮಾಜಿ ಸದಸ್ಯ ನಟರಾಜು ನಾಕಲಗೂಡು, ಪಟ್ಟಣ ಪಂಚಾಯಿತಿ ಸದಸ್ಯರಾದ ತೌಫಿಕ್, ನಿಂಗರಾಜು, ಮುಖಂಡರಾದ ಕಡದಾಳು ರಾಜಪ್ಪಗೌಡ್ರು, ಬೆಳ್ಳೂರು ಗಂಗಾಧರಪ್ಪ, ಸುರೇಶ್, ಮಲ್ಲಿಕಾರ್ಜುನ್, ಕವಳಿಕೆರೆ ಹಿರಣ್ಣಗೌಡ, ಲಾಯರ್ ಮಹೇಶ್, ಶಂಕರಾಚಾರ್, ಬಸವರಾಜು, ಜಯಪಾಲ, ಹುಣಸವಳ್ಳಿ ಧರ್ಮಣ್ಣ ಉಪಸ್ಥಿತರಿದ್ದರು.