

ಮೈಸೂರು: ಪಾಕಿಸ್ತಾನದ ಪಿತಾಮಹ ಕಾಂಗ್ರೆಸ್ ಆಗಿರುವ ಕಾರಣಕ್ಕೆ ಪ್ರತಿ ಬಾರಿ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಸಂದರ್ಭ ಕಾಂಗ್ರೆಸ್ ನವರು ಸಾಕ್ಷಿ ಕೇಳುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.
ಆಪರೇಷನ್ ಸಿಂಧೂರ ಕುರಿತು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ನೀಡಿದ ಹೇಳಿಕೆಗೆ ನಗರದಲ್ಲಿ ಶುಕ್ರವಾರ ತಿರುಗೇಟು ನೀಡಿದ ಅವರು, ಕೊತ್ತೂರು ಮಂಜುನಾಥ್‌ಗೆ ದೇಶದ ಬಗ್ಗೆ ಏನು ಗೊತ್ತಿದೆ? ಅವರಿಗೆ ರಿಯಲ್ ಎಸ್ಟೇಟ್ ಬಗ್ಗೆ ಕೇಳಿದರೆ ಹೇಳುತ್ತಾರೆ. ಅವರಿಗೆ ದೇಶ, ಯುದ್ಧ ಅಂದರೆ ಏನು ಗೊತ್ತಿದೆ? ಮಂಜುನಾಥ್ ಅವರು ಕಾಂಗ್ರೆಸ್ ನಾಯಕ ಶಶಿತರೂರು ಬಳಿಯೇ ಕೇಳಲಿ, ಅವರೇ ಸರಿಯಾಗಿ ಉತ್ತರ ಕೊಡುತ್ತಾರೆ. ಪ್ರತಿ ಬಾರಿಯೂ ಯುದ್ಧ ನಡೆದ ಸಂದರ್ಭದಲ್ಲಿ ಪಾಕಿಸ್ತಾನಕ್ಕಿಂತಲೂ ಮೊದಲು ಸಾಕ್ಷಿ ಕೇಳುವುದು ಕಾಂಗ್ರೆಸ್‌ನವರು. ಈ ಹಿಂದಿನ ಸಂದರ್ಭದಲ್ಲೂ ಅವರು ಅದೇ ಕೆಲಸ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬ್ರಹ್ಮೋಸ್ ಕ್ಷಿಪಣಿ ಸಿದ್ಧವಾಗಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಎಂಬ ಸಚಿವ ಮಧುಬಂಗಾರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಅನ್ಪಡ್‌ಗಳೆಲ್ಲಾ ರಾಜಕಾರಣಕ್ಕೆ ಬಂದರೆ, ಸಚಿವರಾದರೆ ಇದೇ ರೀತಿ ಆಗೋದು. ಶಿಕ್ಷಣ ಸಚಿವರು ಯಾವ ಕಾಲೇಜಿನಲ್ಲಿ ಓದಿದರು? ಅವರ ಶಿಕ್ಷಣದ ಕತೆ ಏನು ಅಂಥ ಎಲ್ಲರಿಗೂ ಗೊತ್ತಿದೆ ಬಿಡಿ. ಅದಕ್ಕೆನೇ ಹೇಳೋದು ಅಕ್ಷರಸ್ಥರು ರಾಜಕಾರಣಕ್ಕೆ ಬರಬೇಕು ಅಂತ. ಅಕ್ಷರಸ್ಥರು ಸಚಿವರಾದರೆ ಇಂತಹ ಹೇಳಿಕೆಗಳು ಬರೋದಿಲ್ಲ ಎಂದು ಟೀಕಿಸಿದರು.