ಸಂವಿಧಾನದ ರಕ್ಷಣೆಗೆ 2ನೇ ಸ್ವಾತಂತ್ರೃ ಸಂಗ್ರಾಮ ಪ್ರಾರಂಭಿಸಲು ಕಾಂಗ್ರೆಸ್ ಸಿದ್ಧ

Mahadevappa
Published on

ಮೈಸೂರು: ಧರ್ಮ ಮತ್ತು ದೇವರ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಹೊರಟಿರುವ ಕೋಮುವಾದಿ ರಾಜಕಾರಣವನ್ನು ಕೊನೆಗಾಣಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ನಗರ ಮತ್ತು ಜಿಲ್ಲಾ ಕಾಂಗ್ರೆಸ್, ಕಾಂಗ್ರೆಸ್ ಸೇವಾದಳ ವತಿಯಿಂದ ಗುರುವಾರ ನಗರದ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸೇವಾದಳ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಳುವಳಿಗೆ ಆಗಾಧವಾದ ಶಕ್ತಿ ಇದೆ. ಇಂದಿನ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಚಳುವಳಿಯನ್ನು ನಿರಂತರವಾಗಿ ನಡೆಸುವ ಮೂಲಕ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಎರಡನೇ ಸ್ವಾತಂತ್ರೃ ಸಂಗ್ರಾಮ ಪ್ರಾರಂಭಿಸಲು ಕಾಂಗ್ರೆಸ್ ಪಕ್ಷ ಸಿದ್ಧವಿದೆ ಎಂದು ಹೇಳಿದರು.

ಅನೇಕ ಧರ್ಮಗಳು, ವಿವಿಧ ಭಾಷೆಯ ಜನರು ವಾಸಿಸುವ ಬಹುತ್ವದ ಭಾರತಕ್ಕೆ ಕಾಂಗ್ರೆಸ್ ಅನೇಕ ಕೊಡುಗೆಗಳನ್ನು ನೀಡಿದೆ. ಕೋಮುವಾದ, ಮತೀಯವಾದ, ಧರ್ಮಾಂಧತೆ , ಸ್ವಾತಂತ್ರೃದ ಉದ್ದೇಶವನ್ನು ನಾಶಮಾಡುತ್ತಿದೆ. ದೇಶದ ಚರಿತ್ರೆಯನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ. ನಮ್ಮ ನಾಗರಿಕ ಬದುಕನ್ನು, ಸಾಂಸ್ಕೃತಿಕ ಜೀವನವನ್ನು ನಾಶಮಾಡಿ ಬಹುತ್ವಕ್ಕೆ ಭಂಗ ತರುವ ಕೆಲಸ ನಡೆಯುತ್ತಿದೆ. ಹೀಗಾಗಿ ಸರ್ವಾಧಿಕಾರ ಆಡಳಿತವನ್ನು ಕೊನೆಗಾಣಿಸಬೇಕು ಕರೆ ನೀಡಿದರು.

ಕಾಂಗ್ರೆಸ್ ಎಂದರೆ ಒಗ್ಗೂಡುವಿಕೆ ಎಂದರ್ಥ. ಜನರನ್ನು ಒಗ್ಗೂಡಿಸಿ ಜನಶಕ್ತಿಯ ಮೂಲಕ ಪರಕೀಯರು ನಮ್ಮನ್ನು ಆಳುವಿಕೆಯ ವಿರುದ್ಧವಾಗಿ ಕಾಂಗ್ರೆಸ್ ಹೋರಾಟ ಮಾಡಿದೆ. ವಸಹಾತುಶಾಹಿ ಸಾಮ್ರಾಜ್ಯದ ವಿರುದ್ಧವಾಗಿ ಸಂಘಟನಾತ್ಮಕವಾಗಿ ಅಹಿಂಸೆ ಮತ್ತು ಅಸಹಕಾರ ಚಳುವಳಿಯನ್ನು ಮಾಡಿರುವ ಕಾಂಗ್ರೆಸ್‌ನ ಉದ್ದೇಶ ಕೋಮುಸೌರ್ಹದತೆ ಕಾಪಾಡುವುದು, ಅಸ್ಪಶ್ಯತೆ ನಿವಾರಣೆ ಮಾಡುವುದು ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ಹೋರಾಟ ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಮಾಡಿದ್ದಲ್ಲ. ಜನರು ಮತ್ತು ದೇಶದ ಹಿತಕ್ಕಾಗಿ ಮಾಡಿದ ಚಳುವಳಿ. ಕಾಂಗ್ರೆಸ್‌ನ ಅನೇಕ ನಾಯಕರು ತ್ಯಾಗ, ಬಲಿದಾನಗಳನ್ನು ಮಾಡಿರುವುದು ಚರಿತ್ರೆಯಲ್ಲಿ ದಾಖಲಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಸದಸ್ಯರು ಎಂದೇಳಲು ನಮ್ಮೆಲ್ಲರಿಗೂ ಹಮ್ಮೆ ಇದೆ. ಸಿದ್ಧಾಂತದ ಅನ್ವಯ ಹೋರಾಟಗಳನ್ನು ಕೈಗೊಂಡು ಗುಲಾಮಗಿರಿಯನ್ನು ಕೊನೆಗೊಳಿಸಲಾಗಿದೆ ಎಂದರು.

ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ಬದ್ಧತೆ ಇತ್ತು. ವೈಚಾರಿಕ ಮತ್ತು ವೈಜ್ಞಾನಿಕ ಆಲೋಚನೆ ಮೈಗೂಡಿಸಿಕೊಂಡಿದ್ದರು. ದೇಶವನ್ನು ಮುನ್ನಡೆಸುವ ದಾರಿ ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ನೆಹರು ಅವರು ಈ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಹರ್ನಶಿ ಶ್ರಮಿಸಿದ್ದಾರೆ. ಸ್ವಾತಂತ್ರೃ ದೊರೆತಾಗ ದೇಶದಲ್ಲಿ ಸಾಕ್ಷರತೆ ಪ್ರಮಾಣ ಶೇ.10 ರಷ್ಟು ಮಾತ್ರ ಇತ್ತು, ಪ್ರಸ್ತುತ ಶೆ.84ಕ್ಕೆ ಏರಿಕೆ ಕಂಡಿದೆ. ಶ್ರೇಣಿಕೃತ ಸಮಾಜ ಬಹುಸಂಖ್ಯಾತರನ್ನು ಶಿಕ್ಷಣದಿಂದ ವಂಚಿಸಿತ್ತು. ತಳಸಮುದಾಯಕ್ಕೆ ಮತ್ತು ಶೂದ್ರಸಮುದಾಯಗಳಿಗೆ ಶಿಕ್ಷಣ ವಂಚಿಸುವ ಕಾರ್ಯಕ್ರಮ ರೂಪಿಸಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ‘ಡೊನೆಟ್ ಫಾರ್ ದೇಶ್’ ವಂತಿಕೆ ಸಂಗ್ರಹ ಅಭಿಯಾನಕ್ಕೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ವೈಯಕ್ತಿಕವಾಗಿ 1.38 ಲಕ್ಷ ರೂ. ದೇಣಿಗೆ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕಿ ಸುನೀತಾ ವೀರಪ್ಪಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net