

ಮಡಿಕೇರಿ: ರಾಜ್ಯದ ಜಿಲ್ಲೆಗಳಲ್ಲಿ ಕಾಂಗ್ರೆಸ್ ತನ್ನ ರೈತ ವಿರೋಧಿ ನೀತಿಯಿಂದ ಅನುಸರಿಸುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಆರೋಪಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಕೊಡಗು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅಮ್ಮಣಿಚಂಡ ರಂಜಿ ಪೂಣಚ್ಚ ಅವರು, ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಯಾವ ರೀತಿಯಲ್ಲೂ ಸಹಕರಿಸುತ್ತಿಲ್ಲ. ಕಳೆದ ಎರಡು ವರ್ಷದಿಂದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುತ್ತಿದ್ದ ರೈತ ವಿದ್ಯಾನಿಧಿ ನಿಲ್ಲಿಸಿದೆ. ಬಿಜೆಪಿ ಸರ್ಕಾರ ನೀಡುತ್ತಿದ್ದ ಮಾಸಿಕ ೪೦೦೦ ರೂಪಾಯಿ ಕಿಸಾನ್ ಸಮ್ಮಾನ್ ನಿಧಿಯನ್ನು ನಿಲ್ಲಿಸಿದೆ. ರೈತರ ಕೃಷಿ ಪಂಪ್ ಸೆಟ್‌ಗೆ ಟ್ರಾನ್ಸ್ ಪಾರ್ಮರ್ ಅಳವಡಿಕೆಗೆ ಬಿಜೆಪಿ ಸರ್ಕಾರ ೨೫೦೦೦ ನಿಗದಿಪಡಿಸಿತ್ತು. ಆದರೆ, ಇಂದಿನ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಒಂದು ಪಂಪ್ ಸೆಟ್‌ಗೆ ಟ್ರಾನ್ಸ್ ಪಾರ್ಮರ್ ಅಳವಡಿಸಲು ೩ ಲಕ್ಷ ನೀಡಬೇಕಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ನೀಡುವ ರಸಗೊಬ್ಬರ ಕೇಂದ್ರ ಸರ್ಕಾರ ಹೆಚ್ಚಿಗೆ ನೀಡಿದ್ದರು ಕೂಡ ರೈತರಿಗೆ ನೀಡದೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆ. ಜೊತೆಗೆ ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ನೀಡಿದ್ದ ೩೪೫೪ ಕೋಟಿ ರೂಪಾಯಿಯಲ್ಲಿ ನಯಾ ಪೈಸೆಯನ್ನು ರಾಜ್ಯದ ರೈತರಿಗೆ ನೀಡುತ್ತಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಕಳೆದ ೨ ವರ್ಷಗಳಲ್ಲಿ ೩೪೦೦ ಕ್ಕಿಂತ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವ ಅವರು, ಭೂಸಿರಿ ಯೋಜನೆಯಡಿಯಲ್ಲಿ ಸಿರಿಧಾನ್ಯ ಬೆಳೆಯುತ್ತಿರುವ ರೈತರಿಗೆ ಪ್ರತಿ ಹೇಕ್ಟೆರ್ಗೆ ೧೦,೦೦೦ ರೂ ನೀಡುವ ಪ್ರೋತ್ಸಾಹ ಧನವನ್ನು ನಿಲ್ಲಿಸಿದ್ದಾರೆ ಎಂದು ದೂರಿದ್ದಾರೆ.
ಜೊತೆಗೆ ಕೊಡಗು ಜಿಲ್ಲೆಯಲ್ಲಿ ವನ್ಯ ಜೀವಿಗಳು ಮತ್ತು ರೈತರ ನಡುವಿನ ಸಂಘರ್ಷ ತಡೆಗಟ್ಟುವಲ್ಲಿ ವಿಫಲರಾಗಿರುವ ಶಾಸಕರು, ಆನೆ ದಾಳಿಯಲ್ಲಿ ಮೃತ ಪಟ್ಟವರಿಗೆ, ಹುಲಿ ದಾಳಿಯಲ್ಲಿ ಹಸು, ದನಗಳನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರವಾಗಲಿ ಅಥವಾ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ನಾಮಕವಸ್ಥೆಗೆ ರಾಜ್ಯ ವನ್ಯಜೀವಿ ಮಹಾಮಂಡಳಿ ಸದಸ್ಯರಾಗಿ ಒಬ್ಬರನ್ನು ನೇಮಿಸಿದ್ದು ಜನ, ಜಾನುವಾರು ಸತ್ತ ಮೇಲೆ ಓಡಿ ಬರುವ ಇವರುಗಳು ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಯಾವುದೇ ಮುತುವರ್ಜಿ ತೋರಿಸುತ್ತಿಲ್ಲ. ಪದೇ ಪದೇ ಪತ್ರಿಕೆಯಲ್ಲಿ ಫೋಟೋ ಮತ್ತು ಹೇಳಿಕೆ ನೀಡಲು ಮಾತ್ರ ಇವರುಗಳು ಸೀಮಿತ ಎಂದು ಟೀಕಿಸಿದರು.
ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವಾಣಿಜ್ಯ ಬೆಳೆಗಳಾದ ಕಾಫಿ, ಕರಿಮೆಣಸು, ಅಡಕೆ ಬೆಳೆಗಳು ನಾಶವಾಗಿದ್ದು, ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ನಿರ್ದೇಶಿಸಿ ಆದಷ್ಟು ಬೇಗ ಸರ್ವೇ ಕಾರ್ಯ ನಡೆಸಿ ರೈತರಿಗೆ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಲೋಪಗಳು ಸರಿಯಾಗದಿದ್ದಲ್ಲಿ ಕೊಡಗು ಜಿಲ್ಲಾ ರೈತ ಮೋರ್ಚಾ ವತಿಯಿಂದ ನೊಂದವರೊಂದಿಗೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.