

ಮಳವಳ್ಳಿ: ಈ ಹಿಂದೆ ಶಾಸಕರಾಗಿದ್ದವರ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳಿಗೆ ಸರ್ಕಾರದಿಂದ ತಾಂತ್ರಿಕ ಅನುಮೋದನೆ ಪಡೆದು ಚಾಲನೆ ನೀಡಲಾಗುತ್ತಿದ್ದು, ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಇದಕ್ಕೆ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ಡಾ.ಕೆ.ಅನ್ನದಾನಿ ಕಿಡಿಕಾರಿದರು.
ತಾಲೂಕಿನ ಬಾಚನಹಳ್ಳಿಯಲ್ಲಿ ಗುರುವಾರ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2006ರಲ್ಲಿ ಮೊದಲು ಶಾಸಕನಾದ ಸಂದರ್ಭ ಅಂದಿನ ಸಿಎಂ ಕುಮಾರಸ್ವಾಮಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ.ಅನುದಾನ ನೀಡಿದ್ದರು. ನಂತರ ಬಂದ ಶಾಸಕರು ಕೆಲವು ಯೋಜನೆಗಳನ್ನು ಮುಂದುವರಿಸಿದ್ದರು. ಆಗ ನಮ್ಮ ಕಾರ್ಯಕರ್ತರು ಅಡ್ಡಿ ಉಂಟು ಮಾಡಿರಲಿಲ್ಲ. ಆದರೆ ಈಗ ರಾಜಕೀಯ ಕಾರಣಕ್ಕೆ ಕೈ ಕಾರ್ಯಕರ್ತರು ವಿರೋಧ ಮಾಡುವುದು ಸರಿಯಲ್ಲ ಎಂದರು.
ಕ್ಷೇತ್ರದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸುವುದರ ಜತೆಗೆ ಜನರ ವಿಶ್ವಾಸ ಗಳಿಸುವ ಕೆಲಸ ಮಾಡಲಿ ಎಂದರು.
ಇದಕ್ಕೂ ಮುನ್ನ ತಗಡಯ್ಯನದೊಡ್ಡಿ, ಶಿರಮಹಳ್ಳಿ ಗ್ರಾಮಗಳಲ್ಲಿ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಮಲ್ಲೇಗೌಡ, ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ, ಉಪಾಧ್ಯಕ್ಷೆ ಜಯಮ್ಮ, ಪುರಸಭೆ ಸದಸ್ಯ ಸಿದ್ದರಾಜು, ಮುಖಂಡರಾದ ವಕ್ಕರಹಳ್ಳಿ ಜಯರಾಜು, ಶ್ರೀನಿವಾಸ್ ಮುಂತಾದವರು ಇದ್ದರು.