ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ

mysore
Published on

ಮೈಸೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ಗೆ ಅರ್ಥಿಗಳೇ ಸಿಗುತ್ತಿಲ್ಲ. ಕೈ ನಾಯಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ಇಲ್ಲ. ಪಕ್ಷದಿಂದ ಟಿಕೆಟ್‌ಗೆ ಅರ್ಜಿ ಆಹ್ವಾನಿಸಿದರೂ ಯಾರೂ ಅರ್ಜಿ ಸಲ್ಲಿಸಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಕಾರ್ಯಕರ್ತರಿಗೆ ಟೀಕಿಸಿದರು

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಡಿದಂತೆ ಲೋಕಸಭಾ ಚುನಾವಣೆಯಲ್ಲೂ 2 ಲಕ್ಷ ರೂ. ನೀಡಿ ಟಿಕೆಟ್‌ಗೆ ಅರ್ಜಿ ಸಲ್ಲಿಸುವಂತೆ ಆಹ್ವಾನ ನೀಡಲಿ ಎಂದು ಸವಾಲು ಹಾಕಿದರು.

ಶ್ವೇತಪತ್ರ ಹೊರಡಿಸಬೇಕು:
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ. ಶಾಸಕರಿಗೆ ಅನುದಾನ ಸಿಗದಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಗ್ಯಾರಂಟಿಗಳ ಹೆಸರಲ್ಲಿ ತಮ್ಮ ನಾಯಕರ ಜೇಬು ತುಂಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆದ್ದರಿಂದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮತ್ತು ಅವುಗಳಿಗೆ ನೀಡಿರುವ ಅನುದಾನದ ಶ್ವೇತಪತ್ರ ಹೊರಡಿಸಬೇಕು ಎಂದು ರಾಜೇಶ್ ಆಗ್ರಹಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ನಗರದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಿದ್ದರು. ಆದರೆ, ಈಗಿನ ಸರ್ಕಾರ ಕೃಷ್ಣರಾಜ ಕ್ಷೇತ್ರಕ್ಕೆ ನೀಡಿದ್ದ 45 ಕೋಟಿ ರೂ. ಅನುದಾನವನ್ನು ಹಿಂಪಡೆದಿದ್ದು, ಈ ಸಂಬಂಧ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದರು.


ಅಭಿನಂದನಾ ನಿರ್ಣಯ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ನಿರ್ಣಯ ಕೈಗೊಳ್ಳಲಾಯಿತು.


ಪಕ್ಷದ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಮಾಜಿ ಶಾಸಕ ಹಾಗೂ ಪಕ್ಷದ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಸಚಿವ, ಮೈಸೂರು ಕ್ಲಸ್ಟರ್ ಅಧ್ಯಕ್ಷ ಎಸ್.ಎ.ರಾಮದಾಸ್, ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಅಧ್ಯಕ್ಷ ಆರ್.ರಘು, ಅಲ್ಪಸಂಖ್ಯಾತರ ಮೋರ್ಚಾ ರಾಜ್ಯ ಅಧ್ಯಕ್ಷ ಡಾ.ಅನಿಲ್ ಥಾಮಸ್, ಮಾಜಿ ಎಂಎಲ್ಸಿ ತೋಂಟದಾರ್ಯ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮಾಜಿ ಮೇಯರ್ ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net