ಮುಳುಗಡೆ ಸಂತ್ರಸ್ತರ ದಾರಿತಪ್ಪಿಸುತ್ತಿದೆ ಕಾಂಗ್ರೆಸ್

bjp pamphlet release
ಶಿವಮೊಗ್ಗದಲ್ಲಿ ಈಡಿಗ ಸಮಾಜದ ಮುಖಂಡ ಬೇಗುವಳ್ಳಿ ಸತೀಶ್ ಬಿಜೆಪಿ ಕರಪತ್ರ ಬಿಡುಗಡೆ ಮಾಡಿದರು. ಸುರೇಶ್ ಸ್ವಾಮಿರಾವ್, ರಾಜನಂದಿನಿ ಕಾಗೋಡು, ಪ್ರಶಾಂತ್, ರಾಘವೇಂದ್ರ ಕೆರೆಹಳ್ಳಿ, ನಗರ ನಿತಿನ್, ಅಶೋಕ್ ಕಿರುವಾಸೆ, ವಿಶ್ವನಾಥ್, ಮಂಜುನಾಥ, ಹೂವಪ್ಪ, ಎಂ.ಡಿ.ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಬಿಜೆಪಿ ಸರ್ಕಾರದಲ್ಲಿ ಈಡಿಗ ಸಮಾಜಕ್ಕೆ ಸಾಕಷ್ಟು ಸೌಲಭ್ಯಗಳು ದೊರೆತಿವೆ. ಈಗ ಕಾಂಗ್ರೆಸ್ ಈಡಿಗರನ್ನು ಸೆಳೆಯಲು ಭಾವನಾತ್ಮಕ ದಾಳ ಉರುಳಿಸುತ್ತಿದೆ. ಆದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಶೇ.80ರಷ್ಟು ಈಡಿಗರು ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ ಎಂದು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ, ಈಡಿಗ ಸಮಾಜದ ಮುಖಂಡ ಬೇಗುವಳ್ಳಿ ಸತೀಶ್ ಹೇಳಿದರು.

ಅಭಿವೃದ್ಧಿ ಮತ್ತು ರಾಷ್ಟ್ರ ರಕ್ಷಣೆ ವಿಚಾರದಲ್ಲಿ ಚುನಾವಣಾ ನಡೆಯುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಂದ ಸಮಾಜಕ್ಕೆ ನಾನಾ ಕಾರ್ಯಗಳು ಆಗಿವೆ. ಯಾವ ಕೊಡುಗೆಯನ್ನೂ ನೀಡದ ಕಾಂಗ್ರೆಸ್ ಮುಳುಗಡೆ ಸಂತ್ರಸ್ತರ ದಾರಿ ತಪ್ಪಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲೆಯಲ್ಲಿ 3.5 ಲಕ್ಷಕ್ಕೂ ಅಧಿಕ ಈಡಿಗ ಮತದಾರರಿದ್ದಾರೆ. ಸಮಾಜಕ್ಕೆ ರಾಘವೇಂದ್ರ ಅವರು ನೂರಾರು ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರ ಬೆಂಗಳೂರಿನಲ್ಲಿ ಆರ್ಯ ಈಡಿಗ ಭವನ, ಶಿವಮೊಗ್ಗದಲ್ಲಿ ಈಡಿಗ ಭವನಕ್ಕೆ ಒಂದು ಎಕರೆ ಜಮೀನು, ತಾಲೂಕು ಕೇಂದ್ರಗಳಲ್ಲಿ ಭವನಗಳ ನಿರ್ಮಾಣಕ್ಕೆ ಕೋಟ್ಯಂತರ ರೂ. ಅನುದಾನ ನೀಡಿದೆ. ಆರ್ಯ ಈಡಿಗ ಅಭಿವೃದ್ಧಿ ನಿಗಮ ರಚನೆ ಮಾಡಿದೆ. ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ 10 ಕೋಟಿ ರೂ. ತೆಗೆದಿರಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದು ವರ್ಷ ಕಳೆದರೂ ನಿಗಮಕ್ಕೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದು ದೂರಿದರು.
ಜಿಪಂ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಪ್ರಮುಖರಾದ ರಾಜನಂದಿನಿ ಕಾಗೋಡು, ಪ್ರಶಾಂತ್, ರಾಘವೇಂದ್ರ ಕೆರೆಹಳ್ಳಿ, ನಗರ ನಿತಿನ್, ಅಶೋಕ್ ಕಿರುವಾಸೆ, ವಿಶ್ವನಾಥ್, ಮಂಜುನಾಥ, ಹೂವಪ್ಪ, ಎಂ.ಡಿ.ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ಶರಾವತಿ ಸಂತ್ರಸ್ತರ ಪರ ಬಿಜೆಪಿ
ಶರಾವತಿ ಮುಳುಗಡೆ ಸಂತ್ರಸ್ತರ ಪರ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಏನೂ ಮಾಡಲಿಲ್ಲ ಎಂದು ಬೇಗುವಳ್ಳಿ ಸತೀಶ್ ದೂರಿದರು. 1980ರವರೆಗೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಆಗಲೇ ಸಮಸ್ಯೆ ಪರಿಹಾರಕ್ಕೆ ಅವಕಾಶವಿತ್ತು. 2017ರಲ್ಲಿ ಕಾಗೋಡು ತಿಮ್ಮಪ್ಪ ಅವರು ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದ್ದರು. ಆಗ ಕೆಲವರಿಗೆ ಹಕ್ಕುಪತ್ರ ವಿತರಿಸಿದ್ದರು. ಆದರೆ ಅದರಲ್ಲಿ ಚೆಕ್ಕುಬಂದಿ ಸೇರಿ ಯಾವ ವಿವರಗಳೂ ಇರಲಿಲ್ಲ. ಅದನ್ನು ಸಾಮಾಜಿಕ ಕಾರ್ಯಕರ್ತ ಗಿರೀಶ್ ಆಚಾರ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕೇಂದ್ರದ ಪೂರ್ವಾನುಮತಿ ಪಡೆಯದೇ ಹಕ್ಕುಪತ್ರ ವಿತರಿಸಿರುವುದು ಅಸಿಂಧು ಎಂದು ಹೈಕೋರ್ಟ್ ಆದೇಶ ಮಾಡಿತ್ತು. ಬಿಜೆಪಿ ಸರ್ಕಾರ ಹೊಸದಾಗಿ ರೈತರ ಜಮೀನಿನ ಸರ್ವೇ ಮಾಡಿಸಿ 9,169 ಎಕರೆ ಡಿನೋಟಿಫಿಕೇಶನ್ ಮಾಡಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ದೆಹಲಿಗೂ ಹೋಗಿ ಸಚಿವರನ್ನು ಭೇಟಿ ಮಾಡಿದ್ದರು. ಪ್ರಸ್ತಾವನೆಗೆ ಸುಪ್ರೀಂ ಕೋರ್ಟ್ ಅನುಮತಿ ಅಗತ್ಯ ಎಂದು ಕೇಂದ್ರ ಸರ್ಕಾರ ಹಿಂಬರಹ ನೀಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net