ಮಂಗಳೂರು: ದ.ಕ ಜಿಲ್ಲೆಯಲ್ಲಿ ಮಧ್ಯರಾತ್ರಿ ಪೊಲೀಸರು ಮನೆಗೆ ಹೋಗಿ ಫೋಟೊ ತೆಗೆಯೋದು ಯಾವ ಕಾನೂನು ಪುಸ್ತಕದಲ್ಲಿದೆ? ಭಾರತ್ ಮಾತಾಕೀ ಜೈ ಎನ್ನುವವರನ್ನೂ, ಪಾಕಿಸ್ತಾನ್ ಜಿಂದಾಬಾದ್ ಹೇಳೋರನ್ನೂ ಸಮಾನವಾಗಿ ನೋಡುವುದು ಸರಿಯಾ? ಪೊಲೀಸರು ಇಂತಹ ವರ್ತನೆಯನ್ನು ಕೈಬಿಡುವಂತೆ ಖುದ್ದು ಭೇಟಿ ನೀಡಿ ಹೇಳಿದ್ದೇವೆ. ಇದೆಲ್ಲ ಬಹಳ ದಿನ ನಡೆಯಲ್ಲ. ಇನ್ನು ಎರಡೇ ವರ್ಷ ಸರ್ಕಾರ ಇರೋದು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ದ.ಕ.ದಲ್ಲಿ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಿಜೆಪಿ ನಿಯೋಗದೊಂದಿಗೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದರು.
ದಕ್ಷಿಣ ಕನ್ನಡದ ಎಲ್ಲ ಪೊಲೀಸ್ ಠಾಣೆಗಳು ಕಾಂಗ್ರೆಸ್ ಠಾಣೆಗಳಾಗಿವೆ. ಇಲ್ಲಿ ಸಾರ್ವಜನಿಕರಿಗೆ ಯಾವುದೇ ರಕ್ಷಣೆ ಸಿಗುತ್ತಿಲ್ಲ. ಯಾರ್ಯಾರ ಮಾತು ಕೇಳಿ ಹಿಂದುಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಹೀಗೆ ಮುಂದುವರಿದರೆ ಮುಂದೆ ಪಶ್ಚಾತ್ತಾಪ ಪಡಬೇಕಾದೀತು. ಇಂದೇ ಲಾಸ್ಟ್. ನಾಳೆಯಿಂದ ಇಂಥ ಪಾಠ ಇಟ್ಕೋಬೇಡಿ. ಹಿಂದೂ ಕಾರ್ಯಕರ್ತರಿಗೆ ತೊಂದರೆಯಾಗಲು ನಾವು ಬಿಡಲ್ಲ. ಇಡೀ ಪಕ್ಷ ಕಾರ್ಯಕರ್ತರ ಜತೆಗಿದೆ. ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎನ್ನುತ್ತಾರೆ. ರೌಡಿ ಎನ್ನಲು ಬಹಳ ವ್ಯಾಖ್ಯಾನಗಳಿವೆ. ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಮೇಲೆ ಎಷ್ಟು ಪ್ರಕರಣಗಳಿಲ್ಲ? ನ್ಯಾಯಾಲಯವು ಅಪರಾಧಿ ಅಂತ ತೀರ್ಮಾನ ಮಾಡುವವರೆಗೂ ಅಪರಾಧಿಯಾಗಲು ಸಾಧ್ಯವಿಲ್ಲ. ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣವನ್ನು ಬೇಕಾದರೆ ಎನ್‌ಐಎಗೆ ವಹಿಸಲಿ, ನಮ್ಮ ಆಕ್ಷೇಪವಿಲ್ಲ ಎಂದು ಆರ್. ಅಶೋಕ್ ಹೇಳಿದರು.