ದೇಶವನ್ನು ಮಾವೋವಾದಿ ವ್ಯವಸ್ಥೆಗೆ ನೂಕಲು ಹೊರಟಿರುವ ಕಾಂಗ್ರೆಸ್

Pralhad New New
Published on

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷ ದೇಶವನ್ನು ಮಾಮೋವಾದಿ ವ್ಯವಸ್ಥೆಗೆ ನೂಕಲು ಹೊರಟಂತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಮತ್ತು ಆ ಪಕ್ಷದ ನಾಯಕರ ಭಾಷಣ ಕೇಳಿದರೆ ಇದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ಮಾಮೋವಾದಿ ಜಗತ್ತಿನಲ್ಲೇ ವಿಫಲತೆ ಕಂಡ ವ್ಯವಸ್ಥೆ. ಆದರೆ, ಕಾಂಗ್ರೆಸ್ ಭಾರತದಲ್ಲಿ ಅದನ್ನು ತರಲು ಹೊರಟಂತಿದೆ. ಜನ ಎಚ್ಚರದಿಂದ ಇರಬೇಕು ಎಂದು ಸಚಿವ ಜೋಶಿ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಪಕ್ಷ ದೇಶದ ಎಲ್ಲ ವರ್ಗದ ಜನರ ಆಸ್ತಿ ಕಸಿದುಕೊಳ್ಳುವ ಹುನ್ನಾರ ಮಾಡುತ್ತಿರುವುದು ಅದರ ಪ್ರಣಾಳಿಕೆಯಲ್ಲಿ ಇದ್ದಂತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರ ಆಸ್ತಿ ಸರ್ವೆ ಮಾಡುವುದಾಗಿ ಹೇಳಿದೆ. ಅಂದರೆ, ಯಾರಲ್ಲಿ 2 ಮನೆ, 2 ವಾಹನ ಇರುವುದೋ ಅವರಿಂದ ಒಂದೊಂದು ಕಸಿದುಕೊಳ್ಳುವ ಸಂಚು ಆ ಪಕ್ಷದ್ದು ಎಂದು ದೂರಿದರು.

ಜೀವನಾದಾಯಕ್ಕಾಗಿ 2 ಮನೆ ಮಾಡಿಕೊಂಡು, ಒಂದರ ಬಾಡಿಗೆಯಲ್ಲಿ ಜೀವನ ನಡೆಸಲು ಶಾಶ್ವತ ಆದಾಯ ಮಾಡಿಕೊಂಡಿದ್ದರೆ ಅದನ್ನು ಕಸಿದುಕೊಳ್ಳುತ್ತದೆ ಎಂದು ಎಚ್ಚರಿಸಿದರು.

ಬಡವರಿಗೆ ಏನು ಬೇಕೋ ಅದನ್ನು ಮಾಡುವುದು ಸರ್ಕಾರದ ಕರ್ತವ್ಯ. ಆದರೆ, ಕಾಂಗ್ರೆಸ್ ಆ ನೆಪದಲ್ಲಿ ಎಲ್ಲ ವರ್ಗದವರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ದೇಶಕ್ಕೆ, ಬಡವರಿಗೆ ನಿಜವಾಗಿ ಒಳಿತು ಮಾಡಬೇಕೆಂಬ ಮನಸಿಲ್ಲ. ಆ ಪಕ್ಷದ ಮುಖಂಡರು ತುಷ್ಟೀಕರಣದ ಪರಾಕಾಷ್ಠೆ ತಲುಪಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net