ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ; ವಿವೇಕಾನಂದ ಡಬ್ಬಿ

VIVEKANANDA DABBI PRESS MEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಿಜೆಪಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಸುದ್ದಿಗೋಷ್ಠಿ ನಡೆಸಿದರು. ಗೋಪಾಲ ಘಟಕಾಂಬಳೆ, ಗುರುಲಿಂಗಪ್ಪ ಅಂಗಡಿ, ಈರಣ್ಣ ರಾವೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಬಿಜೆಪಿ ಅವಧಿಯಲ್ಲಿ ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ಸ್ಥಾಪಿಸಿದ 9 ನಿಗಮಗಳಿಗೆ ಅನುದಾನ ಒದಗಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಹೀಗಾಗಿ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿಯ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಆರೋಪಿಸಿದರು.

ಹಿಂದುಳಿದ ವರ್ಗದ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಳಿದ ವರ್ಗದವರ ಸಮಸ್ಯೆ ಅರಿತಿದ್ದರು. ಅಲ್ಲದೇ, ಹಿಂದುಳಿದ ವರ್ಗದ ಕಲ್ಯಾಣಕ್ಕಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದರು. ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿದರು. ಆದರೆ, ಹಿಂದುಳಿದ ವರ್ಗದ ನಾಯಕ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಸರ್ಕಾರ ಆ ಹಿಂದುಳಿದ ವರ್ಗ ನಿಗಮಕ್ಕೆ ಅನುದಾನ ನೀಡದೇ ಅನ್ಯಾಯ ಮಾಡಿದ್ದಾರೆಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಹಿಂದುಳಿದ ವರ್ಗಕ್ಕೆ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಕಾಂಗ್ರೆಸ್ ಕೊಡುಗೆ ಏನು? ಎಸ್‌ಸಿ-ಎಸ್‌ಟಿ ಅನುದಾನವನ್ನೇ ದುರುಪಯೋಗ ಪಡಿಸಿಕೊಂಡಿರುವ ಸಿದ್ದರಾಮಯ್ಯ ಆ ಸಮುದಾಯಕ್ಕೂ ಅನ್ಯಾಯ ಮಾಡಿದ್ದರೆ. ಸದ್ಯ ರಾಜ್ಯದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅಶಾಂತಿ ಹೆಚ್ಚಾಗಿದೆ. ಭಯದ ವಾತಾವರಣ ಸೃಷ್ಠಿಯಾಗಿದೆ. ಆರ್ಥಿಕವಾಗಿ ಹಿಂದುಳಿದ ಜನರನ್ನು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಅರಾಜಕತೆ ಸೃಷ್ಠಿ ಮಾಡುವ ಯತ್ನ ನಡೆದಿದೆ ಎಂದರು.

ಜಿಲ್ಲೆಯಲ್ಲಿಯೂ ಶೈಕ್ಷಣಿಕ ವ್ಯವಸ್ಥೆ ಕುಂಠಿತಗೊಂಡಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವಿಜಯಪುರ ಜಿಲ್ಲೆ 34 ನೇ ಸ್ಥಾನಕ್ಕೆ ಕುಸಿದಿದೆ. ಪಿಯುಸಿ ಫಲಿತಾಂಶದಲ್ಲಿ 29 ನೇ ಸ್ಥಾನಕ್ಕೆ ಕುಸಿದಿದೆ. ವಿಶ್ವ ವಿದ್ಯಾಲಯಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿದಿದೆ. ಕಾಂಗ್ರೆಸ್‌ನ ಒಳಜಗಳ ಮುಚ್ಚಿಕೊಳ್ಳಲು ಜನರ ಹಾದಿ ತಪ್ಪಿಸುವ ಕೆಲಸ ನಡೆದಿದೆ. ಜನಸಾಮಾನ್ಯರು ಬೇಸತ್ತಿದ್ದಾರೆ ಎಂದರು.

ಎಸ್‌ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡದ ಅನುದಾನ ಕೂಡ ನುಂಗಿ ನೀರು ಕುಡಿದಿರುವ ಸಿದ್ದರಾಮಯ್ಯ ಸರ್ಕಾರ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಚುನಾವಣೆಯ ಸರಕಾಗಿ ಬಳಸಿಕೊಳ್ಳುತ್ತಿದೆ. ಹಾಗೆ ನೋಡಿದರೆ ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುತ್ತಿರುವುದು, ಅವರ ಸ್ಥಳಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಕೇಂದ್ರದ ಬಿಜೆಪಿ ಸರ್ಕಾರ ಎಂದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಭೀಮಾಶಂಕರ ಹದನೂರ, ಈರಣ್ಣ ರಾವೂರ, ವಿಜಯಕುಮಾರ ಜೋಶಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net