ಕಾಂಗ್ರೆಸ್‌ನಿಂದ ಮುಂಗೈಗೆ ತುಪ್ಪ ಸವರುವ ಕೆಲಸ; ಮುಖಂಡ ವಿಜುಗೌಡ ಪಾಟೀಲ ಲೇವಡಿ

VIJUGOUDA PATIL
VIJUGOUDA PATIL
Published on

ವಿಜಯಪುರ: ಕಳೆದ ಎರಡು ವರ್ಷಗಳ ಆಡಳಿತಾವಧಿಯಲ್ಲಿ ಜನರ ಮುಂಗೈಗೆ ತುಪ್ಪ ಸವರುವ ಕೆಲಸ ಬಿಟ್ಟರೆ ಕಾಂಗ್ರೆಸ್ ಯಾವುದೇ ಸಾಧನೆ ಮಾಡಿಲ್ಲವೆಂದು ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಮಾಜಿ ಅಧ್ಯಕ್ಷ ವಿಜುಗೌಡ ಪಾಟೀಲ ಲೇವಡಿ ಮಾಡಿದರು.

ಸಾಧನಾ ಸಮಾವೇಶ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಎರಡು ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯ. ಇದೊಂದು ಲಂಚದ ಸರ್ಕಾರ. ಜನರಿಗೆ ಮೋಸ ಮಾಡಿ, ಗ್ಯಾರಂಟಿ ಆಮಿಷ ತೋರಿಸಿ 135 ಸ್ಥಾನ ಗೆದ್ದ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಲಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಬಬಲೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಕೇಂದ್ರದ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡು ತಮ್ಮ ಹೆಸರು ಹೇಳಿಕೊಳ್ಳುತ್ತಿದ್ದಾರೆ. ಮಿನಿ ವಿಧಾನ ಸೌಧ, ನೋಂದಣಿ ಕಚೇರಿ ಆರಂಭವಾದರೂ ಅಧಿಕಾರಿಗಳಿಲ್ಲ. ರಸ್ತೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ್ ಮಿಷನ್ ಕಾಮಗಾರಿಗೆ ಹಿನ್ನಡೆಯಾಗಿದೆ. ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ತಿಡಗುಂದಿಯಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ತೀವ್ರ ವಿರೋಧವಿದ್ದು, ರೈತರ ಬೆನ್ನೆಲುಬಾಗಿ ಬಿಜೆಪಿ ನಿಲ್ಲಲಿದೆ. ಈಗಾಗಲೇ ಅಲ್ಲಿನ ರೈತರಿಗೆ ಬೆಂಬಲ ನೀಡುವುದಾಗಿ ಮನವರಿಕೆ ಮಾಡಿದ್ದರೂ ರೈತರೇ ನಿರಾಸಕ್ತಿ ತೋರಿದ್ದರು. ಹೀಗಾಗಿ ಪಕ್ಷದ ಬ್ಯಾನರ್ ಅಡಿಯಲ್ಲಿಯೇ ಹೋರಾಟ ರೂಪಿಸಲಾಗುವುದೆಂದು ವಿಜುಗೌಡ ಪಾಟೀಲ ಪ್ರತಿಕ್ರಿಯಿಸಿದರು.

ಮುಖಂಡ ಸಂತೋಷ ಕುರದಡ್ಡಿ ಮಾತನಾಡಿ, ವೈದ್ಯಕೀಯ ಸೇವೆಗಳಿಗಾಗಿ ಜನ ಪರದಾಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 150 ನರ್ಸ್ ಹುದ್ದೆಗಳು ಖಾಲಿ ಇವೆ. ಸುಮಾರು 50 ವೈದ್ಯರ ಹುದ್ದೆಗಳು ಖಾಲಿ ಇದ್ದು ಜನ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಪ್ರಯೋಜನವಿಲ್ಲ. ಪರಿಸ್ಥಿತಿ ಹೀಗಿರುವಾಗ ಸಾಧನಾ ಸಮಾವೇಶ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕೆಂದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಈರಣ್ಣ ರಾವೂರ, ವಿಜಯ ಜೋಷಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net