

ಸಾಗರ: ಕಾಂಗ್ರೆಸ್ ಪಕ್ಷವು 139 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ್ದು, ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಕಟಿಬದ್ಧವಾಗಿ ಕೆಲಸ ಮಾಡುತ್ತಾ ಬಂದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಧ್ವಜಾರೋಹಣ ಹಾಗೂ ಪುಷ್ಪನಮನ ನೆರವೇರಿಸಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಕಾಂಗ್ರೆಸ್ ಪಕ್ಷದ ಮಹನೀಯರನ್ನು ನಾವು ಸದಾ ನೆನೆಯಬೇಕು. ನೆಹರು ದೇಶದ ಮೊದಲ ಪ್ರಧಾನಿಯಾದಾಗ ಕೇವಲ 832 ಕೋಟಿ ರೂ. ಹಣದಲ್ಲಿ ಭವ್ಯ ಭಾರತವನ್ನು ಕಟ್ಟುವ ದೂರ ದೃಷ್ಟಿಯನ್ನಿಟ್ಟುಕೊಂಡು ದೇಶವನ್ನು ಮುನ್ನಡೆಸಿದರು. ಮಾನವ ಸಂಪನ್ಮೂಲದ ಸದ್ಬಳಕೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂದು ಜಾರಿಗೆ ತಂದ ಉದ್ಯೋಗ ಖಾತ್ರಿಯಂತಹ ಯೋಜನೆ ಇಂದು ಬರಗಾಲದಲ್ಲಿಯೂ ರೈತರ ಬದುಕಿಗೆ ವರದಾನವಾಗಿದೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ರಾಜ್ಯದ ಜನರ ಬದುಕಿಗೆ ಆಸರೆಯಾಗಿದೆ. ನಮ್ಮ ಪಕ್ಷ ಸಂವಿಧಾನದ ಮೂಲ ಆಶಯಗಳನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಕೆಲಸ ಮಾಡುತ್ತಾ ಬಂದಿದೆ. ಪಕ್ಷದ ಸಿದ್ಧಾಂತ, ತತ್ವಕ್ಕೆ ಅನುಗುಣವಾಗಿ ನಾವೆಲ್ಲರೂ ಕೆಲಸ ಮಾಡೋಣ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಪ್ರಶ್ನಿಸುವ ಹಕ್ಕನ್ನೇ ದಮನ ಮಾಡುವ ಮೂಲಕ ಪ್ರಜಾಪ್ರಭುತ್ವದ ಬೇರನ್ನೇ ಕೆಡವಲು ಹೊರಟಿರುವ ಬಿಜೆಪಿಯನ್ನು ಮಣಿಸಬೇಕಾದರೆ ಪ್ರತಿಯೊಬ್ಬ ಕಾಂಗ್ರೆಸ್ಸಿಗನು ಇಚ್ಛಾಶಕ್ತಿಯಿಂದ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. ವೈಯಕ್ತಿಕ ಚಿಂತನೆಗಿಂತ ಸಂಘಟನಾತ್ಮಕ ಶಕ್ತಿ ಮುಖ್ಯವಾದುದು ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ಕಾಂಗ್ರೆಸ್ ಪಕ್ಷ ದುರ್ಬಲ ವರ್ಗದ ಜನರ ಏಳಿಗೆಗಾಗಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅನೇಕ ಸವಲತ್ತುಗಳನ್ನು ನೀಡುತ್ತಾ ಬಂದಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಜನಕಲ್ಯಾಣವನ್ನು ಮರೆತು, ಧರ್ಮವನ್ನು ಮುಂದಿಟ್ಟುಕೊಂಡು ದ್ವೇಷದ ವಾತಾವರಣ ಸೃಷ್ಟಿಸಲು ಹೊರಟಿದೆ. ಬರುವ ದಿನಗಳಲ್ಲಿ ಜನರೇ ಇವರಿಗೆ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ತಾಲೂಕು ಮಹಿಳಾ ಅಧ್ಯಕ್ಷೆ ಸುಮಂಗಲಾ ರಾಮಕೃಷ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ಮಧುಮಾಲತಿ, ಗಣಪತಿ ಮಂಡಗಳಲೆ, ಮಹಾಬಲ ಕೌತಿ, ಗಲ್ಲಿ ವೆಂಕಟೇಶ್, ಎಂ.ಗಣಪತಿ, ಗಿರೀಶ್ ಕೋವಿ ಇತರರಿದ್ದರು.