ಸೈನಿಕರ ಮನೋಬಲ ಹೆಚ್ಚಿಸುತ್ತಿದೆ ಕಾಂಗ್ರೆಸ್

saleem ahammed
Published on

ಹುಬ್ಬಳ್ಳಿ: ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ಕೊಡುತ್ತಿದ್ದಾರೆ. ಸೈನಿಕರ ಮನೋಬಲ ಹೆಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಎಲ್ಲ ಮಸೀದಿಗಳಲ್ಲಿಯೂ ದೇಶದ ಸೈನಿಕರಿಗಾಗಿ ಪ್ರಾರ್ಥನೆ ಮಾಡಲು ತಿಳಿಸಲಾಗಿದೆ ಎಂದರು.

ದೇಶದ ಭದ್ರತೆ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಲೇಬೇಕು. ನಮ್ಮ ಸೈನಿಕರು ತಕ್ಕ ಉತ್ತರ ಕೊಡಬೇಕು, ಕೊಡುತ್ತಿದ್ದಾರೆ.

ಇದು ಮಹಾತ್ಮಾ ಗಾಂಧೀಜಿ ನಾಡು. ಗಾಂಧೀಜಿ ಒಂದು ಕಾಪಾಳಕ್ಕೆ ಹೊಡೆದರೆ ಇನ್ನೊಂದು ಕಾಪಾಳ ನೀಡಲು ಹೇಳಿದ್ದರು.

ಆದರೆ, ಅದನ್ನ ಮೀರಿದರೆ ನಾವು ಕಾಪಾಳ ಮೋಕ್ಷ ಮಾಡೋದು ನಮ್ಮ ಧರ್ಮ ಎಂದು ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದರು.

ಪರಿಹಾರ ವಿತರಣೆ: ಸಿಎಂ ಘೋಷಿಸಿದಂತೆ 10 ಲಕ್ಷ ರೂ. ಪರಿಹಾರ ಚೆಕ್ ಅನ್ನು ಸಂತ್ರಸ್ತ ಬಾಲಕಿ ಕುಟುಂಬಕ್ಕೆ ಶುಕ್ರವಾರ ನಗರದಲ್ಲಿ ವಿತರಿಸಲಾಯಿತು.

ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ನೇತೃತ್ವದಲ್ಲಿ ಚೆಕ್ ವಿತರಣೆ ಮಾಡಲಾಯಿತು.

ನಂತರ ಮಾತನಾಡಿದ ಸಲೀಂ ಅಹ್ಮದ್, ಸಿಎಂ ಭರವಸೆ ನೀಡಿದಂತೆ ಹತ್ಯಗೀಡಾದ ಬಾಲಕಿ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಲಾಗಿದೆ. ಶಾಸಕ ಪ್ರಸಾದ ಅಬ್ಬಯ್ಯ ಆಶ್ರಯದ ಭರವಸೆ ನೀಡಿದ್ದಾರೆ. ಜಿಲ್ಲಾಡಳಿತದಿಂದ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲಾಗುವುದು ಎಂದರು.

ಸಾಮಾನ್ಯವಾಗಿ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 10 ಲಕ್ಷ ರೂ. ನೀಡಲಾಗಿದೆ. ಹೆಚ್ಚಿನ ಪರಿಹಾರಕ್ಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು. ಹುಬ್ಬಳ್ಳಿ ಸಿಲಿಂಡರ್ ಸೋರಿಕೆಯಿಂದ ಮೃತ 8 ಜನರಿಗೆ ಒಟ್ಟಾಗಿ 40 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತರ ಕುಟುಂಬದವರೆಲ್ಲರ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net