

ರಾಯಚೂರು: ದೆಹಲಿಯ ಸಂಸತ್ ಭವನದಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ ಅಹಿತಕರ ಘಟನೆ ಹಿಂದೆ ಕಾಂಗ್ರೆಸ್‌ನವರ ಕೈವಾಡವಿದ್ದು, ನಾಲ್ಕೆದು ದಿನಗಳಲ್ಲಿ ಅದರ ಪೂರ್ಣ ವಿವರ ಬಹಿರಂಗಗೊಳ್ಳಲಿದೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಾಯಕರು ವಿನಾಕಾರಣ ಸಂಸದ ಪ್ರಕಾಶ ಸಿಂಹ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಯಾರದು ತಪ್ಪು, ಯಾರದು ಸರಿ ಎಂದು ಹೇಳಲು ನಾನು ವಿಚಾರಣಾಕಾರಿ ಅಲ್ಲ. ಆದರೆ ಶೀಘ್ರದಲ್ಲಿ ಸತ್ಯ ಹೊರಬರಲಿದೆ ಎಂದರು.
ರಾಜ್ಯದಲ್ಲಿ ಒಳ ಮೀಸಲಾತಿ ಹೋರಾಟ ಹುಟ್ಟುಹಾಕಿದ್ದೇ ನಾನು, 1983ರಿಂದ ಹೋರಾಟ ನಡೆಯುತ್ತಿದೆ. ಆದರೆ ಹೆಸರು ಮಾತ್ರ ಬದಲಾವಣೆಯಾಗಿದೆ. ಸದಾಶಿವ ಆಯೋಗಕ್ಕೆ ಸಿಬ್ಬಂದಿ, ಅನುದಾನ ನೀಡದ ಸಿದ್ದರಾಮಯ್ಯ ಈಗ ವರದಿ ಬಗ್ಗೆ ಮಾತನಾಡುತ್ತಿದ್ದಾರೆ.
ಹೈದರಾಬಾದ್‌ನಲ್ಲಿ ಜರುಗಿದ ಮಾದಿಗ ಸಮಾವೇಶದಲ್ಲಿ ಪ್ರಧಾನಿ ಮೋದಿ ಒಳ ಮೀಸಲಾತಿ ಜಾರಿಗೊಳಿಸುವ ಭರವಸೆ ನೀಡಿದ್ದು, ಅದಕ್ಕೆ ಅಗತ್ಯ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಸಂಸತ್‌ನಲ್ಲಿ ಮಂಡನೆ ಮಾಡಿ ಒಳ ಮೀಸಲಾತಿ ಜಾರಿಗೊಳಿಸುವ ವಿಶ್ವಾಸ ನಮಗಿದೆ.
ಆರ್‌ಎಸ್‌ಎಸ್ ಕಚೇರಿ ಒಳಗೆ ಬಿಟ್ಟಿಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಹಲವು ವರ್ಷಗಳಿಂದ ಪಕ್ಷದಲ್ಲಿದ್ದೇನೆ. ನಾನು ದಲಿತನಾದರೂ ಎಲ್ಲೆಡೆ ಓಡಾಡಿದ್ದೇನೆ. ಈಗ ಕಾಲ ಬದಲಾಗಿದೆ. ಅವರಿಗೆ ಯಾಕೆ ಹಾಗೆ ಅನ್ನಿಸಿದೆಯೋ ಗೊತ್ತಿಲ್ಲ.
ಮಾದಿಗ ಸಮುದಾಯದ ಜನರು ಬಿಜೆಪಿ ಜತೆಗಿಲ್ಲ ಎನ್ನುವುದು ಸುಳ್ಳು ಅಭಿಪ್ರಾಯ. ಬಹುತೇಕ ಮಾದಿಗ ಸಮುದಾಯದ ಜನರು ಬಿಜೆಪಿಯೊಂದಿಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿನ ಎಲ್ಲ ಸ್ಥಾನಗಳಲ್ಲಿಯೂ ಬಿಜೆಪಿ ಗೆಲುವು ಸಾಸಲಿದೆ ಎಂದು ರಮೇಶ ಜಿಗಜಿಣಗಿ ತಿಳಿಸಿದರು.