

ಶ್ರೀರಂಗಪಟ್ಟಣ: ದೇಶದಲ್ಲಿ ಶ್ರಮಿಕ, ಹಿಂದುಳಿದ ಹಾಗೂ ಶೋಷಿತರ ದನಿಯಾಗಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಆರ್ಥಿಕ ಭರವಸೆಯ ಜೀವನ ಕಲ್ಪಿಸುವ ಜತೆಗೆ ಸಮ ಸಮಾಜ ನಿರ್ಮಿಸಲಿದೆ ಎಂದು ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಭರವಸೆ ನೀಡಿದರು.
ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ರಂಗೇರಿದ್ದು, ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಕೆ.ಶೆಟ್ಟಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಾದ ಬಾಬುರಾಯನಕೊಪ್ಪಲು, ಕಿರಂಗೂರು, ರಾಂಪುರ, ದೊಡ್ಡೇಗೌಡನ ಕೊಪ್ಪಲು, ಕೆಂಗಾರಕೊಪ್ಪಲು, ಲಾಲಿಪಾಳ್ಯ, ಅಚ್ಚಪ್ಪನಕೊಪ್ಪಲು, ಆರತಿ ಉಕ್ಕಡ, ಕಡತನಾಳು, ದರಸಗುಪ್ಪೆ, ನೆಲಮನೆ ಸೇರಿದಂತೆ ಹಲವೆಡೆ ಭೇಟಿ ನೀಡಿ ಪ್ರಣಾಳಿಕೆಯ ಭಿತ್ತಿ ಪತ್ರಗಳನ್ನು ಜನರಿಗೆ ಹಂಚುವ ಮೂಲಕ ಚುನಾವಣಾ ಪ್ರಚಾರ ನಡೆಸಿ ಬಳಿಕ ಚರ್ಚಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ 5 ಜನಪರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ ನುಡಿದಂತೆ ನಡೆದು ಕನ್ನಡಿಗರ ನಂಬಿಕೆ ಗಳಿಸಿದೆ. 2024ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ರೈತರು, ಮಹಿಳೆಯರು, ಕಾರ್ಮಿಕರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಶೋಷಿತ ಸಮುದಾಯಗಳಿಗೆ ಹಲವು ಯೋಜನೆ, ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಏ.17 ರಂದು ಎಐಸಿಸಿ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹಾಗೂ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಜಿಲ್ಲೆಯ ಲೋಕಸಭಾ ಚುನಾವಣಾ ಅಭ್ಯರ್ಥಿ ವೆಂಕಟರಮಣೇಗೌಡ ಅವರ ಪರ ಚುನಾವಣಾ ಪ್ರಚಾರಕ್ಕಾಗಿ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಗಂಧ ಹಾಗೂ ರಕ್ತಚಂದನ ಮರಗಳನ್ನು ಕಡಿಸಿ ಕಳ್ಳ ಸಾಗಣೆ ಮಾಡುತ್ತಿದ್ದಾರೆಂಬ ಆರೋಪದಡಿ ಆದಿಚುಂಚನಗಿರಿ ಶ್ರೀಗಳ ಫೋನ್ ಟ್ಯಾಪ್ ಮಾಡಿಸಿದ್ದು ಯಾರು? ಜನರ ದೃಷ್ಟಿಯಲ್ಲಿ ಶ್ರೀಗಳ ಮೇಲೆ ಅಪನಂಬಿಕೆ ಉಂಟಾಗುವಂತೆ ಮಾಡಿದವರು ಯಾರು ಎಂಬುದನ್ನು ಜಿಲ್ಲೆಯ ಹಾಗೂ ರಾಜ್ಯದ ಜನರು ಯಾವ ಕಾರಣಕ್ಕೂ ಮರೆಯದೆ ನೆನೆಯಬೇಕು ಎಂದರು.
ಮನ್‌ಮುಲ್ ಅಧ್ಯಕ್ಷ ಬೋರೇಗೌಡ, ದರಸಗುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜಿನಿ, ಸದಸ್ಯರಾದ ಮಾಲತಿ, ಕುಮಾರ್ ಮುಖಂಡರಾದ ಸಂದೇಶ್, ಗುರುಪ್ರಸಾದ್, ರವೀಂದ್ರ, ನಿಜಗುಣ, ಉಮೇಶ್, ವಿಶ್ವೇಶ್ವರ, ಮುರಳಿ, ಮೋಹನ್‌ಕುಮಾರ್, ಚಂದ್ರು, ಪ್ರಕಾಶ್, ಜಯರಾಮು, ದೊಡ್ಡೇಗೌಡನಕೊಪ್ಪಲು ಶಿವರಾಮು, ಮಹೇಶ್, ಸತೀಶ್, ವಿಜಯೇಂದ್ರ ಪುಟ್ಟು ಇತರರು ಹಾಜರಿದ್ದರು.