ಕಾಂಗ್ರೆಸ್‌ಗೆ ಸೋಲಿನ ಭೀತಿಯಿಂದ ಮತದಾರರಿಗೆ ಹಣ ಹಂಚಿಕೆ, ಶೆಟ್ಟರ್ ಆರೋಪ

05-Jaggu-2.jpg
Published on

ಬೆಳಗಾವಿ: ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಶುರುವಾಗಿದೆ. ಹೀಗಾಗಿ ಬೆಳಗಾವಿ ದಕ್ಷಿಣ ಮತ್ತು ಗೋಕಾಕ ವಿಧಾನಸಭೆ ಕ್ಷೇತ್ರಗಳಲ್ಲಿ ಹಣ ಹಂಚುವಾಗ, ಬಿಜೆಪಿ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಡೆಯವರು ಹಣ ಹಂಚುತ್ತಿರುವುದು ಗೊತ್ತಾಗಿದೆ ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಆರೋಪಿಸಿದರು.
 ಇಲ್ಲಿನ ಸದಾಶಿವ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಹಾಪುರ ಠಾಣೆ ವ್ಯಾಪ್ತಿಯಲ್ಲಿ ಹಣ ಹಂಚುತ್ತಿದ್ದವರನ್ನು ಹಿಡಿದುಕೊಟ್ಟ ಬಿಜೆಪಿ ಕಾರ್ಯಕರ್ತರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಲು ಯತ್ನಿಸಿದ್ದಾರೆ. ಕಾಂಗ್ರೆಸ್‌ನವರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಇಂತಹ ಅಕ್ರಮಗಳನ್ನು ತಡೆಯದಿದ್ದರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
 ಕಾಂಗ್ರೆಸ್‌ನವರು ಹಣದಿಂದ ಚುನಾವಣೆಯಲ್ಲಿ ಗೆಲ್ಲುವ ಉಮೇದಿಯಲ್ಲಿದ್ದಾರೆ. ಆದರೆ, ಜನರು ಅವರಿಂದ ಹಣ ಪಡೆದು ಬಿಜೆಪಿಗೇ ಮತ ಹಾಕಲಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಶೂನ್ಯ. ಆದರೆ, ಬಿಜೆಪಿ ನೀಡಿದ ಕೊಡುಗೆಗಳ ದೊಡ್ಡಪಟ್ಟಿಯೇ ಇದೆ. ಈ ಚುನಾವಣೆಯಲ್ಲಿ ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದು, ನಾನು ಹೆಚ್ಚಿನ ಮತಗಳ ಅಂತರದಿಂದ ಗೆದ್ದುಬರುವ ವಿಶ್ವಾಸವಿದೆ ಎಂದರು.
 ಒಂದು ತಿಂಗಳಿಂದ ಪ್ರಚಾರ ಮಾಡುತ್ತಿದ್ದು, ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ಉತ್ತಮ ಸ್ಪಂದನೆ ಸಿಕ್ಕಿದೆ. ನಾಮಪತ್ರ ಸಲ್ಲಿಕೆ ವೇಳೆ, 50 ಸಾವಿರ ಜನ ಸೇರಿದ್ದರು. ಮೋದಿ ಭಾಗವಹಿಸಿದ್ದ ಸಮಾವೇಶವೂ ಯಶಸ್ವಿಯಾಗಿದೆ. ದೇಶದ ರಕ್ಷಣೆಗಾಗಿ ಜನ ಬಿಜೆಪಿಗೇ ಮತ ಹಾಕಲಿದ್ದಾರೆ. ಬಡವರು, ಇತರ ವರ್ಗದವರು ಮೋದಿ ಪರ ಒಲವು ಹೊಂದಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿ. ಸುರೇಶ ಅಂಗಡಿ, ಸಂಸದೆ ಮಂಗಲ ಅಂಗಡಿ ಮಾಡಿದ ಅಭಿವೃದ್ಧಿ ಕೆಲಸಗಳೂ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದರು.
 ನಾನು ಸಂಸದನಾಗಿ ಆಯ್ಕೆಯಾದ ನಂತರ, ಬೆಳಗಾವಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇಲ್ಲಿನ ಕೈಗಾರಿಕೋದ್ಯಮಗಳ ಬೆಳವಣಿಗೆಗೆ ದುಡಿಯುತ್ತೇನೆ. ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಜತೆಗೆ, ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ. ರಾಮದುರ್ಗ ತಾಲೂಕಿನ ಶಬರಿಕೊಳ್ಳ, ಬೈಲಹೊಂಗಲದಲ್ಲಿನ ರಾಣಿ ಚನ್ನಮ್ಮನ ಸಮಾಧಿ ಅಭಿವೃದ್ಧಿ ಮಾಡುತ್ತೇನೆ. ಬೆಳಗಾವಿಯನ್ನು ಅಧಿಕೃತವಾಗಿ 2ನೇ ರಾಜಧಾನಿಯಾಗಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
 ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಸಿದ್ದರಾಮಯ್ಯ ಅವರು ಏನೋ ಹೇಳುತ್ತಾರೆ. ಇದು ಬ್ರಿಟಿಷರ ವಿರುದ್ಧದ ಹೋರಾಟವೇ? ಸ್ವಾತಂತ್ರ್ಯ ಹೋರಾಟವೇ ಎಂದು ಪ್ರಶ್ನಿಸಿದರು. ಕರೊನಾ ಸೋಂಕಿನಿಂದ ದೆಹಲಿಯಲ್ಲಿ ಮೃತಪಟ್ಟ ಸುರೇಶ ಅಂಗಡಿ ಮೃತದೇಹವನ್ನು ಬೆಳಗಾವಿಯನ್ನು ತರಲಿಲ್ಲ. ಶೆಟ್ಟರ್ ಮನಸ್ಸು ಮಾಡಿದರೆ ತರಬಹುದಿತ್ತು ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮಗೆ ಅಂಗಡಿಯವರ ಮೃತದೇಹವನ್ನು ಬೆಳಗಾವಿಗೆ ತರುವ ಆಸೆಯಿತ್ತು. ಅದಕ್ಕಾಗಿ ಪ್ರಯತ್ನಿಸಿದೆವು. ಆದರೆ, ಆಗ ಕಾನೂನಿನ ತೊಡಕು ಇತ್ತು ಎಂದು ಉತ್ತರಿಸಿದರು.
 ಸಂಸದೆ ಮಂಗಲ ಅಂಗಡಿ, ಮಾಜಿ ಶಾಶಕರಾದ ಅನಿಲ ಬೆನಕೆ, ಸಂಜಯ್ ಪಾಟೀಲ, ಮುಖಂಡರಾದ ಎಂ.ಬಿ. ಜಿರಲಿ, ಗೀತಾ ಸುತಾರ, ಸುಭಾಷ ಪಾಟೀಲ ಹನುಮಂತ ಕೊಂಗಾಲಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net