

ದಾಂಡೇಲಿ: ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಮಹಿಳೆಯರ ಸಬಲೀಕರಣಕ್ಕೆ ನೀಡಿದ ಆಶ್ವಾಸನೆಯಂತೆ 5 ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮಿ, ಸ್ತ್ರೀಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳು ಪ್ರತಿ ಕುಟುಂಬದ ಯಜಮಾನಿಯನ್ನು ಸಶಕ್ತಳನ್ನಾಗಿ ಮಾಡಿವೆ. ಶೀಘ್ರದಲ್ಲಿ ನಿರುದ್ಯೋಗಿ ಯುವಕರಿಗೆ ಸಹಾಯಧನದ ಗ್ಯಾರಂಟಿ ಕೂಡ ಜಾರಿಗೆ ಬರಲಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ನಗರದ ಕಾರ್ಮಿಕ ಭವನದಲ್ಲಿ ಬುಧವಾರ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ಮನೆಯ ಯಜಮಾನಿಯ ಖಾತೆಗೆ ನೇರವಾಗಿ 2000 ರೂ. ಜಮಾ ಆಗಲಿದೆ. ಹಳಿಯಾಳ-ದಾಂಡೇಲಿ ಭಾಗದಲ್ಲಿ ಶೇ.88 ರಷ್ಟು ಜೊಯಿಡಾ ಭಾಗದಲ್ಲಿ ಶೇ.85.50 ಫಲಾನುಭವಿಗಳು ಯೋಜನೆಯ ಲಾಭ ಪಡೆಯಲಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕಾರ್ಯಕ್ಕೆ ಕಾಲಮಿತಿಯಿಲ್ಲ. ಉಳಿದ ಫಲಾನುಭವಿಗಳು ನೋಂದಣಿಗೆ ಮುಂದಾಗಬೇಕು. ಮಹಿಳೆಯರ ಸಬಲೀಕರಣ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರದ ಮುಖ್ಯ ಗುರಿಯಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಗಾಗಿ ಉ.ಕ. ಜಿಲ್ಲೆಗೆ ಈಗಾಗಲೇ ಒಟ್ಟು 58.01 ಕೋಟಿ ರೂ. ಬಿಡುಗಡೆ ಮಾಡಿದೆ. ನೋಂದಾಯಿತ ಐವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರವನ್ನು ವಿತರಿಸಿದರು.
ಉ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್, ತಹಸೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ರಾಜಾರಾಂ ಪವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆರ್. ಹೆಗಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ಲಕ್ಷ್ಮೀದೇವಿ ಎಸ್., ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ನಾಯ್ಕರ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಸೋಮಾನಿ ವೃತ್ತದಲ್ಲಿ ಸಿದ್ದಿಗಳ ಡಮಾಮಿ ನೃತ್ಯಕ್ಕೆ ಡಫ್ಲಿ ಬಾರಿಸಿ ಹೆಜ್ಜೆ ಹಾಕಿದರು.