ಕಾಂಗ್ರೆಸ್ ವಂಶಪಾರಂಪರ್ಯ ಪಕ್ಷ

24 ckm 7
ಚಿಕ್ಕಮಗಳೂರಿನ ಬಿಜೆಪಿ ಚುನಾವಣಾ ಕಚೇರಿಯನ್ನು ಮಾಜಿ ಸಚಿವ ಸಿ.ಟಿ.ರವಿ ಉದ್ಘಾಟಿಸಿದರು. ಶೋಭಾ ಕರಂದ್ಲಾಜೆ, ಡಿ.ಎನ್.ಜೀವರಾಜ್, ಎಂ.ಕೆ.ಪ್ರಾಣೇಶ್, ಡಿ.ಎಸ್.ಸುರೇಶ್ ಇತರರಿದ್ದರು.
Published on

ಚಿಕ್ಕಮಗಳೂರು: ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಕಾಂಗ್ರೆಸ್ ಏನಿದ್ದರೂ ವಂಶಪಾರಂಪರ್ಯ ಪಕ್ಷ. ಜವಾಹರ್‌ಲಾಲ್ ನೆಹರು ಕಾಲದಿಂದ ರಾಹುಲ್ ಗಾಂಧಿವರೆಗೂ ಇದನ್ನು ಗಮನಿಸಬಹುದು ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

ಶನಿವಾರ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಕೆಲವೇ ಕುಟುಂಬಗಳ ನಾಯಕರಿಗೆ ಮಾತ್ರ ಅವಕಾಶಗಳು ಸಿಗುತ್ತವೆ. ಆದರೆ ಬೇರೆಯವರಿಗೆ ಅವಕಾಶ ಸಿಕ್ಕಿ ಬೆಳೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಈಗ ಅಂಬೇಡ್ಕರ್ ಎಂದು ಜಪಿಸುತ್ತಿರುವ ಕಾಂಗ್ರೆಸ್, ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿತ್ತು. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದೂ ಕಾಂಗ್ರೆಸ್. ಅವರು ಮೃತಪಟ್ಟಾಗಲೂ ಅಪಮಾನ ಮಾಡಿದ್ದ ಪಕ್ಷದ ಜನರೇ ಇದೀಗ ಅಂಬೇಡ್ಕರ್ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೊದಲ ಹಂತದಲ್ಲೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮೇ ೨೦ರ ಒಳಗಾಗಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಕೇವಲ ಎರಡು ತಿಂಗಳು ಮಾತ್ರ ಉಳಿದಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ತಿಳಿಸಿದರು.
ಲೋಕಸಭಾ ಚುನಾವಣೆ ಮಾತ್ರವಲ್ಲದೆ ಮುಂಬರಲಿರುವ ಜಿಪಂ, ತಾಪಂ, ವಿಧಾನಪರಿಷತ್ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಆ ಮೂಲಕ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸಬೇಕು. ನಮ್ಮ ಒಂದು ಗೆಲುವು ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಳಿಸುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ಮಾಜಿ ಸಚಿವ ಡಿ.ಎನ್.ಜೀವರಾಜ್, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕ ಡಿ.ಎಸ್.ಸುರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರೇಂದ್ರ ಪೈ, ರವೀಂದ್ರ ಬೆಳವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net